ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುತ್ತೂರು ತಾಲೂಕಿನ ಕೆದಿಲದಲ್ಲಿ ನ.೨೨ರಂದು ನಡೆದ ಸರಣಿ ಕಳ್ಳತನದ ಆರೋಪಿಯನ್ನು ಸ್ಥಳೀಯರು ಹಿಡಿದು ಇಲಾಖೆಗೆ ಹಸ್ತಾರಿಸಿದ್ದು, ಕಳ್ಳನನ್ನು ಬಂಧಿಸಿರುವುದಾಗಿ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಮಂಗಳವಾರ ತಿಳಿಸಿದೆ.
ಮೂಲತಃ ವಿಟ್ಲ ಸಮೀಪದ ಕಡಂಬು ನಿವಾಸಿ ಪ್ರಸ್ತುತ ಚಿಕ್ಕಮಂಗಳೂರು ವಾಟರ್ ಟ್ಯಾಂಕ್ ಬಳಿಯ ಉಪ್ಪಳ್ಳಿ ಮನೆ ನಿವಾಸಿ ಅಬೂಬಕ್ಕರ್ ಯಾನೆ ಇತ್ತೆ ಬರ್ಪೆ ಅಬೂಬ್ಬಕರ್ ಬಂಧಿತ. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಡಿ.೧೯ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕೆದಿಲದಲ್ಲಿ ಕಳವುಗೈದ ಸ್ಕೂಟರ್ ಒಂದನ್ನು ಗುಡ್ಡ ಪ್ರದೇಶದಲ್ಲಿ ಅಡಗಿಸಿಟ್ಟಿದ್ದು, ಅದನ್ನು ಸೋಮವಾರ ತೆಗೆದುಕೊಂಡು ಹೋಗುವುದಕ್ಕಾಗಿ ಪೆಟ್ರೋಲ್ ಸಹಿತವಾಗಿ ಅಬೂಬಕ್ಕರ್ ಆಗಮಿಸಿದ್ದಾನೆ. ಕಳವಾದ ದ್ವಿಚಕ್ರವನ್ನು ಹುಡುಕುತ್ತಿದ್ದ ಸ್ಥಳೀಯ ಯುವಕರ ಕೈಗೆ ಸ್ಕೂಟರನ್ನು ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದ ಅಬೂಬಕ್ಕರ್ ಸಿಕ್ಕಿ ಹಾಕಿಕೊಂಡಿದ್ದಾನೆ. ಸ್ಥಳೀಯರು ಆತನನ್ನು ವಿಚಾರಿಸಿದಾಗ ನಿಜ ವಿಷಯ ಬೆಳಕಿಗೆ ಬಂದಿತ್ತು. ನೈಜತೆ ತಿಳಿದ ಬಳಿಕ ಊರವರು ಆತನನ್ನು ಪೊಲೀಸರಿಗೆ ಹಸ್ತಾಂತರ ಮಾಡಿದ್ದರು.
ಅಬೂಬಕ್ಕರ್ ಮೇಲೆ ಮಂಗಳೂರು, ಬಂಟ್ವಾಳ, ಪುತ್ತೂರು, ಮೂಡುಬಿದಿರೆ, ಕಾರ್ಕಳ, ಉಡುಪಿ, ಸುರತ್ಕಲ್, ಚಿಕ್ಕಮಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕಳ್ಳತನದ ಪ್ರಕರಣಗಳು ದಾಖಲಾಗಿರುತ್ತದೆ.