ಹೊಸದಿಗಂತ ವರದಿ ಅಂಕೋಲಾ:
ಬೆನ್ನಟ್ಟಿದ್ದ ಪೊಲೀಸರ ಮೇಲೆ ಕಾರು ಹಾಯಿಸಲು ಯತ್ನ ನಡೆಸಿದ ದನಕಳ್ಳರ ತಂಡವನ್ನು ಅಂಕೋಲಾ ಪೊಲೀಸರು ಬೆನ್ನಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಒಟ್ಟು ಐದು ಜನ ಆರೋಪಿಗಳನ್ನು
ವಶಕ್ಕೆ ಪಡೆಯಲಾಗಿದೆ ಇಬ್ಬರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.
ಮಂಗಳೂರು ಸುರತ್ಕಲ್ ಕಾಟಿಪಾಳ್ಯ ನಿವಾಸಿ ಅಬ್ದುಲ್ ಅಜೀಮ ಅಬ್ದುಲ್ ಖಾದಿರ್ (48), ಮಂಗಳೂರು ಸುರತ್ಕಲ್ ಚೊಕಬೆಟ್ಟು ನಿವಾಸಿ ಮಹಮ್ಮದ್ ಮುಸ್ತಾಕ್ ಅಬ್ದುಲ್ ಹಮೀದ್(25), ಮೂಲ್ಕಿ ನಿವಾಸಿ ಮಹಮ್ಮದ್ ಸುಹಾನ್ ಅಬ್ಬೂಬಕರ್(20),ಮಂಗಳೂರು ಉಲ್ಲಾಳ ನಿವಾಸಿ, ಮಹಮ್ಮದ್ ಇರ್ಬಾಜ್ ಉಲ್ದಾಳ(20) ಸುರತ್ಕಲ್ ನಿವಾಸಿ, ಮಹಮ್ಮದ್ ಆಸಿಕ್ ಅಶ್ರಫ್(22) ಇವರನ್ನು ಬಂಧಿಸಲಾಗಿದ್ದು
ಮಂಗಳೂರಿನ ಮಹಮ್ಮದ್ ಅಜೀಮ ಮತ್ತು ಇನ್ನೋರ್ವ ಪರಾರಿಯಾಗಿದ್ದಾರೆ.
ಆರೋಪಿತರು ಅಂಕೋಲಾ ಜಮಗೋಡ ರೈಲ್ವೆ ನಿಲ್ದಾಣದ ಕ್ರಾಸ್ ಬಳಿ ಬಳಿ ರಸ್ತೆ ಬದಿಯಲ್ಲಿ ಮಲಗಿದ್ದ ಎರಡು ಆಕಳುಗಳನ್ನು ಕಳ್ಳತನ ಮಾಡಿ ಕೆ.ಎಂ4 ಎಂ.ವಿ 6047 ನೋಂದಣಿ ಸಂಖ್ಯೆಯ ಕಾರಿನ ಹಿಂಬದಿ ಸಿಟ್ ಬಳಿ ಹಿಂಸಾತ್ಮಕವಾಗಿ ತುಂಬಿ ಸಾಗುತ್ತಿದ್ದರು.
ಈ ವೇಳೆ ಗಸ್ತು ತಿರುಗುತ್ತಿದ್ದ ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸಿಬ್ಬಂದಿ ಬೆನ್ನಟ್ಟಿದ್ದು ಆರೋಪಿಗಳು ಪೊಲೀಸರ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನ ನಡೆಸಿ ತಪ್ಪಿಸಿಕೊಂಡು ಹೋಗಿದ್ದು ಬೆನ್ನಟ್ಟಿ ಹೋದ ಪೊಲೀಸರು ಬೆಳಸೆ ಸೊಣಗಿಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತರು ಕಾರಿನಲ್ಲಿ ಸಾಗಿಸುತ್ತಿದ್ದ ಆಕಳುಗಳನ್ನು ರಕ್ಷಣೆ ಮಾಡಲಾಗಿದ್ದು ಕೃತ್ಯಕ್ಕೆ ಬಳಸಿದ ಹುಂಡೈ ಕಂಪನಿಯ ಬಳಿ ಬಣ್ಣದ ಕಾರು, ಬೆಂಗಾವಲಿಗೆ ಇದ್ದ ಕೆ.ಎ19ಪಿ 8333 ನೋಂದಣಿ ಸಂಖ್ಯೆಯ ಹೋಂಡಾ ಸಿಟಿ ಕಾರು, ವಿವಿಧ ಕಂಪೆನಿಗಳ ಮೊಬೈಲ್ ಪೋನುಗಳು, ಹಗ್ಗ ಮತ್ತಿತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠ ಎಂ ನಾರಾಯಣ, ಉಪಾಧೀಕ್ಷರುಗಳಾದ ಕೃಷ್ಣಮೂರ್ತಿ, ಜಗದೀಶ. ಎಂ,
ಡಿ.ವೈ ಎಸ್.ಪಿ ಗಿರೀಶ್ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಚಂದ್ರಶೇಖರ ಮಠಪತಿ, ಪಿ.ಎಸ್. ಐ ಉದ್ದಪ್ಪ ಧರೆಪ್ಪನವರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.