ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ತಾವು ಗರ್ಭಿಣಿಯಾದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ನಟಿ ಮತ್ತು ಅವರ ಪತಿ, ರಾಜಕಾರಣಿ ರಾಘವ್ ಚಡ್ಡಾ, ಬಾಲಿವುಡ್ ಮತ್ತು ರಾಜಕೀಯ ಲೋಕದ ಅತ್ಯಂತ ಮುದ್ದಾದ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ “ದಿ ಕಪಿಲ್ ಶರ್ಮಾ ಶೋ”ನಲ್ಲಿ ಭಾಗವಹಿಸಿದ್ದಾಗ ಪ್ರೆಗ್ನೆನ್ಸಿ ಕುರಿತು ಸುಳಿವು ನೀಡಿದ ಇವರಿಬ್ಬರೂ, ಇದೀಗ ಸಾಮಾಜಿಕ ಮಾಧ್ಯಮದ ಮೂಲಕ ಸಂತೋಷದ ಸುದ್ದಿ ಹಂಚಿಕೊಂಡಿದ್ದಾರೆ.
ಪರಿಣಿತಿ ಮತ್ತು ರಾಘವ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಪೋಸ್ಟ್ ಮಾಡಿದ್ದು, “ನಮ್ಮ ಪುಟ್ಟ ಪ್ರಪಂಚ” ಎಂದು ಬರೆದು, 1+1=3 ಎಂಬ ಕೇಕ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರ ಕೆಳಭಾಗದಲ್ಲಿ ಪುಟ್ಟ ಪಾದಗಳ ಚಿತ್ರ ಹಾಗೂ ಇಬ್ಬರು ಕೈ ಹಿಡಿದು ನಡೆಯುವ ವಿಡಿಯೋ ಕೂಡ ಸೇರಿಸಲಾಗಿದೆ. ಪೋಸ್ಟ್ ಹೊರಬಂದ ತಕ್ಷಣವೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಅಭಿನಂದನೆಗಳ ಮಳೆ ಸುರಿಸಿದರು. ನಟಿ ಸೋನಮ್ ಕಪೂರ್ ಸೇರಿದಂತೆ ಅನೇಕರು ಕಾಮೆಂಟ್ ವಿಭಾಗದಲ್ಲಿ ಶುಭಾಶಯ ಕೋರಿದ್ದಾರೆ.
ಇತ್ತೀಚೆಗೆ ಕಪಿಲ್ ಶರ್ಮಾ ಶೋನಲ್ಲಿ ರಾಘವ್ ತಮಾಷೆಯಾಗಿ “ನಾವು ಶೀಘ್ರದಲ್ಲೇ ಒಳ್ಳೆಯ ಸುದ್ದಿ ನೀಡುತ್ತೇವೆ” ಎಂದು ಹೇಳಿದ್ದನ್ನು ಪ್ರೇಕ್ಷಕರು ನೆನೆಸಿಕೊಂಡಿದ್ದಾರೆ. ಅದೇ ಮಾತು ಇದೀಗ ಸತ್ಯವಾಗಿ ಪರಿಣಮಿಸಿದೆ.