ಹೊಸದಿಗಂತ ಡಿಜಿಟಲ್ ಡೆಸ್ಕ್:
ನದಿಗೆ ಅಡ್ಡಲಾಗಿ ಬಾಗಿದ್ದ ತೆಂಗಿನ ಮರವೊಂದರಲ್ಲಿ ಕುಳಿತು ಮೋಜು ಮಾಡುತ್ತಿದ್ದ ಯುವಕರು , ಮರ ಮುರಿದು ಬಿದ್ದಾಗ ಗಾಳಿಯಲ್ಲಿ ಎಸೆಯಲ್ಪಟ್ಟು ನದಿಗೆ ಬಿದ್ದರೂ ಹೆಚ್ಚಿನ ಅಪಾಯವಾಗದೆ ಪಾರಾದ ಘಟನೆಯೊಂದು ಕೇರಳದ ಮಲಪುರಂನಲ್ಲಿ ನಡೆದಿದೆ.
ಕಾರುಲೈಯ ನಾಲ್ವರು ಯುವಕರು ಭಾನುವಾರ ಸಂಜೆ ಕಳಿಕ್ಕಾವು ಎಂಬಲ್ಲಿನ ಕೆಟ್ಟುಂಗಾಲ್ ಚಿರಾದಲ್ಲಿ ನದಿ ಸ್ನಾನಕ್ಕೆಂದು ಬಂದಿದ್ದರು. ಹೀಗೆ ಬಂದವರು ನದಿಗೆ ಅಡ್ಡಲಾಗಿ ಬಾಗಿದ್ದ ತೆಂಗಿನಮರವೇರಿದ್ದರು. ಮರದಲ್ಲಿ ಕುಳಿತು ಜಗ್ಗಾಡುತ್ತಾ ಖುಷಿ ಅನುಭವಿಸುತ್ತಿದ್ದರು. ಯುವಕನೊಬ್ಬ ಅದರ ಗರಿಯೊಂದನ್ನು ಜಗ್ಗಿದಾಗ ತೆಂಗಿನ ಮರ ಇದ್ದಕ್ಕಿದ್ದಂತೆ ಮುರಿದು ಅದರ ಮೇಲೆ ಕುಳಿತಿದ್ದ ಯುವಕರು ಗಾಳಿಯಲ್ಲಿ ಎಸೆಯಲ್ಪಟ್ಟಿದ್ದಾರೆ. ಆದರೆ ಸುದೈವವಶಾತ್ ಹಾಗೆ ಎಸೆಯಲ್ಪಟ್ಟವರು ನದಿಯ ನೀರಿಗೇ ಬಿದ್ದಿದ್ದರಿಂದ ಹೆಚ್ಚಿನ ಅನಾಹುತ ಆಗಲಿಲ್ಲ.
ಮಳೆಗಾಲದಲ್ಲಿ ಇಲ್ಲಿ ನದಿ ಸ್ನಾನಕ್ಕೆಂದು ಅನೇಕರು ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಇದೀಗ ಈ ಯುವಕರು ಮರ ಮುರಿಯುತ್ತಿದ್ದಂತೆ ಗಾಳಿಗೆ ಎಸೆಯಲ್ಪಟ್ಟ ದೃಶ್ಯವುಳ್ಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.