ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ರಿಟನ್ ವಾಯುಪಡೆಯ ಬರೋಬ್ಬರಿ 30 ನಿವೃತ್ತ ಪೈಲಟ್‌ಗಳು ಚೀನಾದ ಸೈನಿಕರಿಗೆ (ಪಿಎಲ್‌ಎ)ಅತಿವೇಗದ ಜೆಟ್ ಮತ್ತು ಯುದ್ಧ ವಿಮಾನ ಹಾರಾಟ ಬಗ್ಗೆ ತರಬೇತಿ ನೀಡುತ್ತಿರುವ ಆಘಾತಕಾರಿ ಬೆಳವಣಿಗೆ ಬಯಲಾಗಿದೆ. ಇದರಿಂದ ಆತಂಕಕ್ಕೆ ಒಳಗಾಗಿರುವ ಬ್ರಿಟನ್ ಆಡಳಿತ ವರ್ಗ ತನ್ನ ನಿವೃತ್ತ ಪೈಲಟ್‌ಗಳನ್ನು ತೀವ್ರವಾಗಿ ತರಾಟೆಗೆತ್ತಿಕೊಂಡು ಎಚ್ಚರಿಕೆ ನೀಡಿದೆ.
ಆಕ್ರಮಣಕೋರ ಚೀನಾದ ಆಡಳಿತಾರೂಢರು, ಬ್ರಿಟನ್ ಮಿಲಿಟರಿಯಲ್ಲಿ ಹಾಲಿ ಕರ್ತವ್ಯ ನಿಭಾಯಿಸುತ್ತಿರುವ ಪೈಲಟ್‌ಗಳಿಗೂ ಬಲೆ ಬೀಸಿದ್ದರು. ಆದರೆ ಪೈಲಟ್‌ಗಳು ಈ ಕುರಿತ ಪ್ರಸ್ತಾವವನ್ನು ನಿರಾಕರಿಸಿದ್ದರು ಎಂದು ಲಂಡನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೀನಾವು ಅಪಾರ ಹಣದಾಸೆ ತೋರಿ ಈ ನಿವೃತ್ತ ಪೈಲಟ್‌ಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಪಾಶ್ಚಾತ್ಯ ಯುದ್ಧ ವಿಮಾನಗಳು ಮತ್ತು ಪೈಲಟ್‌ಗಳ ಕಾರ್ಯ ನಿರ್ವಹಣೆ ಬಗ್ಗೆ ಚೀನೀ ಸೈನಿಕರಿಗೆ ತಮ್ಮ ಅನುಭವವನ್ನು ವಿವರಿಸಿ ತರಬೇತಿ ನೀಡುವ ಬ್ರಿಟನ್ ಪೈಲಟ್‌ಗಳಿಗೆ ಚೀನಾ ಆಡಳಿತ ಬರೋಬ್ಬರಿ237,911 ಪೌಂಡ್ ಸ್ಟರ್ಲಿಂಗ್ ವೇತನ ನೀಡುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.
ಇನ್ನಷ್ಟು ಸಮರ ನಿಪುಣ ಪೈಲಟ್‌ಗಳಿಗಾಗಿ ಚೀನಾ ತಲಾಷ್ ಮುಂದುವರೆಸಿದೆ ಎಂದು ಗುಪ್ತಚರ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್ ಪೈಲಟ್‌ಗಳ ಅನುಭವ-ಮಾಹಿತಿಗಳು ತೈವಾನ್‌ನೊಂದಿಗಿನ ಸಂಘರ್ಷದಲ್ಲಿ ಚೀನಾಗೆ ಬಲು ಪೂರಕವಾಗಲಿವೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಚೀನಾದ ಈ ದ್ರೋಹಿ ಪ್ರವೃತ್ತಿ ಬಗ್ಗೆ ಲಂಡನ್‌ನ ಅಧಿಕಾರಿಗಳಿಗೆ 2019ರಲ್ಲೇ ಮಾಹಿತಿ ಲಭಿಸಿತ್ತು. ಹಂತಹಂತವಾಗಿ ಈ ವಿಚಾರವನ್ನು ಇತ್ಯರ್ಥಪಡಿಸಲು ಬ್ರಿಟನ್ ಆಡಳಿತ ವರ್ಗ ತೀರ್ಮಾನಿಸಿತ್ತು. ನಂತರ ಕೋವಿಡ್‌ನಿಂದಾಗಿ ಚೀನಾಗೆ ಪ್ರಯಾಣ ದುಸ್ತರವಾಗಿತ್ತು. ಇದೀಗ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿದೆ.