January18, 2026
Sunday, January 18, 2026
spot_img

ಬಂದೇ ಬಿಟ್ಟಿತು ಅಮೃತ ಘಳಿಗೆ | ಕಾಜಿರಂಗ ಕಾರಿಡಾರ್‌ಗೆ ಭೂಮಿ ಪೂಜೆ: 6,957 ಕೋಟಿ ರೂ. ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ರಾಜ್ಯದ ಮೂಲಸೌಕರ್ಯ ಮತ್ತು ಸಾರಿಗೆ ಕ್ಷೇತ್ರಕ್ಕೆ ಹೊಸ ವೇಗ ನೀಡುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 6,957 ಕೋಟಿ ರೂ. ವೆಚ್ಚದ ಕಾಜಿರಂಗ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಎರಡು ದಿನಗಳ ರಾಜ್ಯ ಭೇಟಿಯ ಅಂತಿಮ ಹಂತದಲ್ಲಿ ಗುವಾಹಟಿಯಿಂದ ನಾಗಾಂವ್ ಜಿಲ್ಲೆಗೆ ಆಗಮಿಸಿದ ಅವರು ಈ ಮಹತ್ವಾಕಾಂಕ್ಷಿ ಯೋಜನೆಗೆ ಅಧಿಕೃತ ಚಾಲನೆ ನೀಡಿದರು.

ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ಈ ಎಲಿವೇಟೆಡ್ ಕಾರಿಡಾರ್, ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿ–715ರಲ್ಲಿ ಸಂಭವಿಸುತ್ತಿದ್ದ ರಸ್ತೆ ಅಪಘಾತಗಳನ್ನು ತಗ್ಗಿಸುವುದು, ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸುವುದು ಮತ್ತು ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಈ ಯೋಜನೆಯ ಪ್ರಮುಖ ಗುರಿಗಳಾಗಿವೆ.

ಈ ಕಾರಿಡಾರ್ NH–715ರ ಕಲಿಯಾಬೋರ್–ನುಮಲಿಗಢ ವಿಭಾಗದ ಚತುಷ್ಪಥ ಅಭಿವೃದ್ಧಿಯ ಭಾಗವಾಗಿದ್ದು, ಜಖಲಬಂಧ ಮತ್ತು ಬೊಕಾಖಾಟ್ ಪ್ರದೇಶಗಳಲ್ಲಿ ಬೈಪಾಸ್‌ಗಳ ಜೊತೆಗೆ ಸುಮಾರು 34.45 ಕಿಲೋಮೀಟರ್ ಉದ್ದದ ಎತ್ತರದ ವನ್ಯಜೀವಿ ಸ್ನೇಹಿ ರಸ್ತೆ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಯೋಜನೆಯ ಮಾದರಿಯನ್ನು ಪರಿಶೀಲಿಸಿದರು.

ಇದೇ ವೇಳೆ ಪ್ರಧಾನಿ ಅವರು ದಿಬ್ರುಗಢ–ಗೋಮತಿ ನಗರ (ಲಕ್ನೋ) ಹಾಗೂ ಕಾಮಾಖ್ಯ–ರೋಹ್ಟಕ್ ನಡುವಿನ ಎರಡು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ವರ್ಚುವಲ್ ಆಗಿ ಹಸಿರು ನಿಶಾನೆ ತೋರಿದರು. ಈ ರೈಲುಗಳು ಅಸ್ಸಾಂ ಸೇರಿದಂತೆ ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣ ರಾಜ್ಯಗಳ ನಡುವಿನ ದೀರ್ಘದೂರ ಸಂಪರ್ಕವನ್ನು ಬಲಪಡಿಸಿ, ಪ್ರಯಾಣ ಸಮಯವನ್ನು ಕಡಿಮೆ ಮಾಡಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Content is protected !!