ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ದಿನ ನಿಗದಿ ಬಳಿಕವೂ ಕಾಂಗ್ರೆಸ್ ಕೇವಲ ಏಳು ಸ್ಥಾನಗಳಿಗೆ ಮಾತ್ರ ಅಭ್ಯರ್ಥಿ ಹೆಸರನ್ನು ಪ್ರಕಟಿಸಿದ್ದು, ಎರಡನೇ ಪಟ್ಟಿ ಬಿಡುಗಡೆಗೆ ಆಗುತ್ತಿರುವ ವಿಳಂಬ ರಾಜಕೀಯ ಪಡಸಾಲೆಯಲ್ಲಿ ಹಲವು ಚರ್ಚೆಗಳಿಗೆ ಗ್ರಾಸವಾಗುತ್ತಿದೆ.
ಕಳೆದ ವಾರ ಅಭ್ಯರ್ಥಿಗಳ ಘೋಷಣೆಯಾಗುತ್ತದೆ ಎಂದಿದ್ದ ಕಾಂಗ್ರೆಸ್ ನಾಯಕರು ಬಳಿಕ ಮಾರ್ಚ್ ಇಪ್ಪತ್ತರೊಳಗೆ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನುತ್ತಿದ್ದಾರೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆಯೇ ಅಥವಾ ಕಾದು ನೋಡುವ ತಂತ್ರವೇ ಎಂಬ ಕುರಿತು ಬಿಸಿಬಿಸಿ ಚರ್ಚೆಗಳು ಕೇಳಿಬರುತ್ತಿವೆ.
ಈ ನಡುವೆ ಹೆಚ್ಚಿನ ಕ್ಷೇತ್ರಗಳಿಗೆ ನಾಲ್ಕರಿಂದ ಐದು ಆಕಾಂಕ್ಷಿಗಳು ಇರುವುದರಿಂದ ಅಳೆದುತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಿದೆ. ಒಂದೆರಡು ದಿನಗಳಲ್ಲಿ ದಿಲ್ಲಿಗೆ ಪಟ್ಟಿ ಅಂತಿಮ ಸಿದ್ಧ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನೊಂದೆಡೆ ಇದು ಕೆಪಿಸಿಸಿ ಅಧ್ಯಕ್ಷರ ವೈಟ್ ಎಂಡ್ ವಾಚ್ ರಣತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಕೆಲವೊಂದು ಕಡೆಗಳಲ್ಲಿ ಕೆಲವರು ಸ್ಪರ್ಧೆಗೆ ನಿರಾಸಕ್ತಿ ತೋರುತ್ತಿರುವುದೂ ಈ ವಿಳಂಬಕ್ಕೆ ಕಾರಣ ಎಂಬ ಮಾತುಗಳೂ ಕೇಳಿಬರುತ್ತಿದೆ.