ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವ ಕ್ರಿಕೆಟ್ ಲೋಕ ಕಂಡ ದಿ ಬೆಸ್ಟ್ ಗುರು ಶಿಷ್ಯರೆಂದರೆ ಅದು ರಾಹುಲ್ ದ್ರಾವಿಡ್ -ಸಂಜು ಸ್ಯಾಮ್ಸನ್. ಕನ್ನಡಿಗ ರಾಹುಲ್ ದ್ರಾವಿಡ್ ಗರಡಿಯಲ್ಲಿ ಅದೆಷ್ಟೋ ಯುವ ಆಟಗಾರರು ಪಳಗಿದ್ದಾರೆ. ವಿ ಆದ್ರೆ, ಈ ಪೈಕಿ ರಾಹುಲ್ ದ್ರಾವಿಡ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ ಮಾತ್ರ ವಿಶೇಷವಾಗಿ ಕಾಣುತ್ತೆ. ಸಂಜು ಅಂದ್ರೆ ದ್ರಾವಿಡ್ಗೆ ಅದೇನೋ ಗೊತ್ತಿಲ್ಲ, ವಿಶೇಷವಾದ ಪ್ರೀತಿ.
ಸಂಜು ಕರಿಯರ್ನ ರೂಪಿಸುವಲ್ಲಿ ದ್ರೋಣಾಚಾರ್ಯ ದ್ರಾವಿಡ್ ಪಾತ್ರ ಮಹತ್ವದ್ದು. ಅಂದ್ಹಾಗೆ ಇವರಿಬ್ಬರ ಭಾಂದವ್ಯ ಕ್ರಿಕೆಟ್ಗೆ ಸೀಮಿತವಾಗಿದ್ದಲ್ಲ. ಇಬ್ಬರದ್ದೂ ಬೌಂಡರಿ ಆಚೆಗಿನ ಬಂಧ. ಅತ್ಯಂತ ಅನ್ಯೋನ್ಯವಾಗಿದ್ದ ಈ ಗುರು-ಶಿಷ್ಯರ ಸಂಬಂಧದಲ್ಲಿ ಇದೀಗ ಶೀತಲ ಸಮರ ಶುರುವಾದಂತಿದೆ.
ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲ, ಇದು ತಂಡದ ಆಟದ ಮೇಲೂ ಪರಿಣಾಮ ಬೀರುತ್ತಿದೆ ಎಂದು ವರದಿಯಾಗುತ್ತಿದೆ. ಆದರೆ ಈ ವದಂತಿಯ ಬಗ್ಗೆ ಇವರಿಬ್ಬರು ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿರಲಿಲ್ಲ. ಆದರೀಗ ಈ ವದಂತಿಯ ಬಗ್ಗೆ ಸ್ವತಃ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರೇ ಸ್ಪಷ್ಟನೆ ನೀಡುವ ಮೂಲಕ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿತ್ತು. ವಿಡಿಯೋದಲ್ಲಿ, ಸೂಪರ್ ಓವರ್ ಪ್ರಾರಂಭವಾಗುವ ಮೊದಲು ರಾಹುಲ್ ದ್ರಾವಿಡ್ ತಮ್ಮ ತಂಡದ ಸದಸ್ಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಮಿಚೆಲ್ ಸ್ಟಾರ್ಕ್ ಅವರನ್ನು ಎದುರಿಸಲು ಯಾವ ಬ್ಯಾಟ್ಸ್‌ಮನ್‌ಗಳನ್ನು ಕಳುಹಿಸಬೇಕು ಎಂಬ ಕುರಿತು ಚರ್ಚೆ ನಡೆಯುತ್ತಿರುವಂತೆ ಕಾಣುತ್ತದೆ. ಆದರೆ, ಸಂಜು ಈ ಚರ್ಚೆಯಲ್ಲಿ ಇರಲಿಲ್ಲ, ಡಗೌಟ್ ಬಳಿ ಓಡಾಡುತ್ತಿದ್ದರು.
ಈ ಸಂದರ್ಭ ಒಬ್ಬ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಈ ಮೀಟಿಂಗ್ಗೆ ಬನ್ನಿ ಎಂದು ಸನ್ನೆ ಮಾಡುತ್ತಾನೆ. ಆದರೆ ಸಂಜು ಕೈ ಸನ್ನೆ ಮಾಡುವ ಮೂಲಕ ನಾನು ಬರುವುದಿಲ್ಲ ಎಂದು ನಿರಾಕರಿಸುತ್ತಾರೆ. ಪಂದ್ಯದ ಬಳಿಕ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುವುದರೊಂದಿಗೆ ಸಂಜು ಹಾಗೂ ದ್ರಾವಿಡ್ ನಡುವೆ ಬಿರುಕು ಮೂಡಿದೆ ಎಂಬ ವದಂತಿ ಹರಿದಾಡಿತ್ತು.
ಇದೀಗ ಇದಕ್ಕೆ ಉತ್ತರ ನೀಡಿದ ರಾಹುಲ್ ದ್ರಾವಿಡ್, ‘ಇಂತಹ ಸುದ್ದಿ ಎಲ್ಲಿಂದ ಬರುತ್ತದೆಯೋ ನನಗೆ ತಿಳಿದಿಲ್ಲ. ಸಂಜು ಮತ್ತು ನಾನು ಒಂದೇ ತಂಡದಲ್ಲಿದ್ದೇವೆ. ಅವರು ನಮ್ಮ ತಂಡದ ಬಹಳ ಮುಖ್ಯವಾದ ಭಾಗ. ಅವರು ತಂಡದ ಪ್ರತಿಯೊಂದು ಚರ್ಚೆ ಮತ್ತು ನಿರ್ಧಾರದಲ್ಲಿ ಭಾಗಿಯಾಗಿರುತ್ತಾರೆ. ಕೆಲವೊಮ್ಮೆ, ನೀವು ಪಂದ್ಯವನ್ನು ಕಳೆದುಕೊಂಡಾಗ ಮತ್ತು ವಿಷಯಗಳು ಸರಿಯಾಗಿ ನಡೆಯದಿದ್ದಾಗ, ನೀವು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ಆಧಾರರಹಿತ ಮಾತಿನ ಬಗ್ಗೆ ನಾವು ಏನನ್ನೂ ಮಾಡಲು ಸಾಧ್ಯವಿಲ್ಲ. ತಂಡದ ವಾತಾವರಣ ತುಂಬಾ ಚೆನ್ನಾಗಿದೆ. ಆಟಗಾರರ ಕಠಿಣ ಪರಿಶ್ರಮದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಆಟಗಾರರು ಉತ್ತಮವಾಗಿ ಪ್ರದರ್ಶನ ನೀಡದಿದ್ದರೆ ಎಷ್ಟು ನೋವುಂಟಾಗುತ್ತದೆ ಎಂಬುದು ಜನರಿಗೆ ಅರ್ಥವಾಗುವುದಿಲ್ಲ ಎಂದು ಹೇಳುವ ಮೂಲಕ ದ್ರಾವಿಡ್ ವದಂತಿಗೆ ತೆರೆ ಎಳೆದಿದ್ದಾರೆ.