ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಲ್ಲಿ ಯಾರು ಇಲ್ಲದ ಸಮಯ, ಸೀರೆಯ ಉಯ್ಯಾಲೆಯಲ್ಲಿ ಆಡುತ್ತಿದ್ದ ಬಾಲಕನೋರ್ವ, ಅದರಿಂದ ಬಿದ್ದು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ದಿಡುಪೆಯಲ್ಲಿ ಭಾನುವಾರ ಸಂಜೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಮಂಟಮೆ ನಿವಾಸಿ ಬಾಲಕೃಷ್ಣ ಎಂಬವರ ಪುತ್ರ, ಮುಂಡಾಜೆ ಶಾಲೆಯೊಂದರ 8 ನೇ ತರಗತಿ ವಿದ್ಯಾರ್ಥಿ ಶ್ರೀಶ (13) ಮೃತ ಬಾಲಕ.
ಉಯ್ಯಾಲೆಯಿಂದ ಬಿದ್ದಿದ್ದ ಬಾಲಕನನ್ನು ಗಮನಿಸಿದ ತಾಯಿ ಉಪಚರಿಸಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯುವ ವ್ಯವಸ್ಥೆ ಮಾಡಿದರು. ಅಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಆ ವೇಳೆಗಾಗಲೆ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಧನರಾಜ್ ಮತ್ತು ಸಿಬಂದಿ ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.
ಮೃತ ಬಾಲಕನಿಗೆ ತಂದೆ ತಾಯಿ ಹಾಗೂ ಸಹೋದರಿ ಇದ್ದಾರೆ.