ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹೆಮ್ಮೆ ಎನ್ನಿಸಿಕೊಂಡಿರುವ ಕಾಂತಾರ ಈಗ ತನ್ನ ಪ್ರೀಕ್ವೆಲ್‌ನೊಂದಿಗೆ ಮತ್ತೆ ಅಭಿಮಾನಿಗಳ ಮನಸ್ಸನ್ನು ಕದಿಯಲು ಸಜ್ಜಾಗಿದೆ. ಕನ್ನಡ ಸಂಸ್ಕೃತಿ, ಪರಂಪರೆ ಮತ್ತು ನಂಬಿಕೆಗಳನ್ನು ಜಗತ್ತಿಗೆ ಪರಿಚಯಿಸಿದ ಮೊದಲ ಭಾಗದ ಯಶಸ್ಸಿನ ನಂತರ, ಈ ಬಾರಿ ಇನ್ನಷ್ಟು ದೊಡ್ಡ ಕನಸುಗಳೊಂದಿಗೆ ಕಾಂತಾರ ಚಾಪ್ಟರ್ 1 ತೆರೆಗೆ ಬರಲಿದೆ.
ಈ ಹೊಸ ಭಾಗವನ್ನು ನೂರು ಕೋಟಿಗೂ ಹೆಚ್ಚು ಬಜೆಟ್‌ನಲ್ಲಿ ತಯಾರಿಸಲಾಗಿದ್ದು, ಮೊದಲ ಭಾಗಕ್ಕಿಂತ ಹತ್ತು ಪಟ್ಟು ಹೆಚ್ಚಿನ ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರಪಂಚದಾದ್ಯಂತ ಅಕ್ಟೋಬರ್ 2ರಂದು ದಸರಾ ಪ್ರಯುಕ್ತ ಬಿಡುಗಡೆಯಾಗುತ್ತಿರುವ ಈ ಚಿತ್ರ ಈಗಾಗಲೇ ಅಪಾರ ಕುತೂಹಲ ಕೆರಳಿಸಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ, ಚಿತ್ರದ ಪ್ರತಿಯೊಂದು ಪಾತ್ರದ ಫಸ್ಟ್ ಲುಕ್ ಒಂದರ ನಂತರ ಒಂದರಂತೆ ಹೊರಬರುತ್ತಿದೆ. ಇತ್ತೀಚೆಗೆ ನಾಯಕಿ ರುಕ್ಮಿಣಿ ವಸಂತ್ ಅವರ ಪಾತ್ರ ಪರಿಚಯವಾಗಿದ್ದು, ಇದೀಗ ಗುಲ್ಶನ್ ದೇವಯ್ಯ ಅವರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ.
ಗುಲ್ಶನ್ ದೇವಯ್ಯ ಹಿಂದಿ ಸಿನಿರಂಗದಲ್ಲಿ ‘ಶೈತಾನ್’, ‘ಹೇಟ್ ಲವ್ ಸ್ಟೋರಿ’, ‘ಹಂಟರ್’ ಮುಂತಾದ ಚಿತ್ರಗಳ ಮೂಲಕ ಹೆಸರು ಮಾಡಿರುವ ಕಲಾವಿದ. ಈಗ ಅವರು ಕನ್ನಡದ ಈ ದೊಡ್ಡ ಪ್ರಾಜೆಕ್ಟ್‌ನಲ್ಲಿ ಪಾತ್ರ ನಿರ್ವಹಿಸುತ್ತಿರುವುದು ವಿಶೇಷ ಕುತೂಹಲ ಹುಟ್ಟಿಸಿದೆ. ಮತ್ತೊಂದೆಡೆ, ಕಾಂತಾರ 1 ಚಿತ್ರ ಕೇವಲ ತೆಲುಗು ಮಾರ್ಕೆಟ್‌ನಲ್ಲೇ ನೂರು ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಬಿಸಿನೆಸ್ ಮಾಡಿರುವುದು, ಈ ಫ್ರಾಂಚೈಸಿಗೆ ಎಷ್ಟು ದೊಡ್ಡ ಮಟ್ಟದ ಬೆಂಬಲ ಮತ್ತು ಕ್ರೇಜ್ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ರಿಷಬ್ ಶೆಟ್ಟಿ ತಮ್ಮ ಶ್ರಮದಿಂದ ಮೂಡಿಸಿರುವ ಈ ಪ್ರೀಕ್ವೆಲ್ ಮೂರು ವರ್ಷದ ಪರಿಶ್ರಮದ ಫಲವಾಗಿದ್ದು, ಮೇಕಿಂಗ್ ವಿಡಿಯೋ ಈಗಾಗಲೇ ಜನರ ಗಮನ ಸೆಳೆದಿದೆ.
ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸುವ ಶಕ್ತಿ ಕಾಂತಾರ ಚಾಪ್ಟರ್ 1 ಹೊಂದಿದೆ ಎನ್ನುವ ನಂಬಿಕೆ ಅಭಿಮಾನಿಗಳಲ್ಲಿದೆ. ಅಕ್ಟೋಬರ್‌ನಲ್ಲಿ ತೆರೆಗೆ ಬರಲಿರುವ ಈ ಸಿನಿಮಾ, ಮೊದಲ ಭಾಗದಂತೆ ಜಗತ್ತನ್ನು ಕನ್ನಡದತ್ತ ತಿರುಗಿಸುವಲ್ಲಿ ಯಶಸ್ವಿಯಾಗುವುದೇ ಎಂಬುದು ಕಾದು ನೋಡಬೇಕಾಗಿದೆ.