ಡಿಕೆಶಿ ರಕ್ಷಣೆಗೆ ಕ್ಯಾಬಿನೆಟ್ ನಡೆಸಿದ್ದು, ಕಾನೂನಿನ ಸ್ಪಷ್ಟ ಉಲ್ಲಂಘನೆ: ವಿಪಕ್ಷ ನಾಯಕ ಆರ್.ಅಶೋಕ್

ಹೊಸ ದಿಗಂತ ವರದಿ, ಚಿತ್ರದುರ್ಗ:

ರಾಜ್ಯ ಸರ್ಕಾರ ಡಿ.ಕೆ.ಶಿವಕುಮಾರ್ ರಕ್ಷಣೆಗೆ ಅಕ್ರಮವಾಗಿ ವಿಶೇಷ ಕ್ಯಾಬಿನೆಟ್ ನಡೆಸಿದ್ದು, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ. ಕೋರ್ಟ್ ಛೀಮಾರಿ ಹಾಕಿದರೆ ಕ್ಯಾಬಿನೆಟ್‌ಗೆ ಕಪ್ಪು ಚುಕ್ಕೆ ಉಂಟಾಗಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.

ನಗರದ ಹೊರವಲಯದಲ್ಲಿರುವ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಶನಿವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಡಿ.ಕೆ.ಶಿವಕುಮಾರ್ ಅಕ್ರಮ ಆಸ್ತಿ ಮಾಡುರುವುದು ಅಪರಾಧ. ಶೇಕಡಾ 380 ರಷ್ಟು ಆದಾಯ ಜಾಸ್ತಿ ಆಗಿರುವುದನ್ನು ಗಮನದಲ್ಲಿಟ್ಟುಕೊಂಡು ಸಿಬಿಐಗೆ ನೀಡಲಾಗಿತ್ತು. ಶೇ.70 ರಷ್ಟು ಸಿಬಿಐ ತನಿಖೆ ಮುಗಿದಿದೆ. ಸುಪ್ರೀಂ ಕೋರ್ಟ್ ಕೂಡಾ ಹೈಕೋರ್ಟ್‌ನಲ್ಲಿ ತೀರ್ಮಾನ ಮಾಡುವಂತೆ ಸುಪ್ರಿಂ ಕೋರ್ಟ್ ಸಹ ಸೂಚನೆ ನೀಡಿತ್ತು ಎಂದರು.

ಹೈಕೋರ್ಟ್ ಮೂರು ತಿಂಗಳ ಒಳಗೆ ಜಾರ್ಜ್ ಶೀಟ್ ಹಾಕಲು ತಿಳಿಸಿತ್ತು. ಮೊನ್ನೆ ಕೇಸ್ ಇದ್ದರೂ ಡಿಕೆಶಿ ಪರ ವಕೀಲರು ಕೇಸ್ ಮುಂದೂಡಿದ್ದಾರೆ. ಇದನ್ನು ನೋಡಿದರೆ ಉದ್ದೇಶಪೂರ್ವಕವಾಗಿ ಕೇಸ್ ಮುಂದಕ್ಕೆ ಹಾಕಿಸಿರುವುದು ಸ್ಪಷ್ಟವಾಗುತ್ತದೆ. ಎಲ್ಲವನ್ನು ಮುಚ್ಚಿಟ್ಟುಕೊಂಡು ಈ ಕೆಲಸ ಮಾಡಿದ್ದಾರೆ. ಹಲವಾರು ಕಾನೂನು ತಜ್ಞರು ಈ ಕುರಿತು ಹೇಳಿದ್ದಾರೆ. ಚಾರ್ಜ್‌ಶೀಟ್ ಹಾಕಿದ ಬಳಿಕ ನ್ಯಾಯಾಂಗಕ್ಕೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ಇರುವಾಗ ಈ ರೀತಿ ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಅಡ್ವ್ವೊಕೇಟ್ ಜನರಲ್ ಕೂಡಾ ಅಭಿಪ್ರಾಯ ತಿಳಿಸಿದ್ದಾರೆ. ಸಿಬಿಐ ತನಿಖೆ ಮಾಡಬೇಕು ಎಂದು ತಿಳಿಸಿದ್ದಾರೆ. ಕೇಸ್ ವಜಾ ಮಾಡಿ ಎಂದು ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್ ಈ ಕೇಸ್ ಮುಂದುವರಿಸುವಂತೆ ಸೂಚನೆ ನೀಡಿದೆ. ನ್ಯಾಯಾಂಗದ ಇತಿಹಾಸದಲ್ಲೇ ಇದೊಂದು ಕಪ್ಪು ಚುಕ್ಕೆ. ಈ ಸರ್ಕಾರ ನಗೆ ಪಾಟಲಿನ ಪರಿಸ್ಥಿತಿಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ನಾಯಕ ಒತ್ತಡಕ್ಕೆ ಮಣಿದು ಇಂತಹ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷ ಇದನ್ನು ಖಂಡಿಸುತ್ತದೆ. ಈ ಕುರಿತು ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಸಚಿವ ಆರ್.ಬಿ. ತಿಮ್ಮಾಪುರ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಆರ್.ಅಶೋಕ್, ಬೆಳಗಾವಿ ಮನೆ ಸೋರುತ್ತಿದೆ. ಆದರೆ ಅಲ್ಲಿನ ಜನಪ್ರತಿನಿಧಿಗಳು ದುಬೈಗೆ ಹೋಗಿದ್ದಾರೆ. ದುಬೈಗೆ ಹೋಗಿ ಮೊದಲು ಅವರನ್ನು ಕರೆತನ್ನಿ. ಡಿ.ಕೆ.ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದು ಶಾಸಕರು ಘೋಷಣೆ ಮಾಡಿದ್ದಾರೆ. ತಿಮ್ಮಾಪೂರ್ ಮೊದಲು ಇದನ್ನು ನೋಡಿಕೊಳ್ಳಲಿ ಬಳಿಕ ನಮ್ಮ ಪಕ್ಷದ ಬಗ್ಗೆ ಮಾತನಾಡಲಿ. ನಾನು ಮತ್ತು ವಿಜಯೇಂದ್ರ ಸೇರಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.

ವಿ.ಸೋಮಣ್ಣ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಆರ್.ಅಶೋಕ್, ಸೋಮಣ್ಣ ಜೊತೆ ಪಕ್ಷದ ಹಿರಿಯರು ಮಾತನಾಡುತ್ತಿದ್ದಾರೆ. ಚುನಾವಣೆಯಲ್ಲಿ ನನಗೂ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಪಕ್ಷ ಹೇಳಿತ್ತು. ಶೆಟ್ಟರ್, ಸವದಿಗೂ ಪಕ್ಷ ಟಿಕೆಟ್ ಕೊಡಲಿಲ್ಲ. ಒಂದಷ್ಟು ಚಿಕ್ಕಪುಟ್ಟ ಗೊಂದಲಗಳಿವೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿ ಮಾಡುತ್ತೇವೆ ಎಂದ ಅವರು, ಕಾಂಗ್ರೆಸ್‌ಗೆ 135 ಸೀಟು ಬಂದ ಬಳಿಕ ಸಿದ್ದರಾಮಯ್ಯ ಮೂರು ದಿನ ದೆಹಲಿಯಲ್ಲಿ ಇದ್ದರು. ಸಿದ್ದರಾಮಯ್ಯ ಸಿಎಂ ಆದಲ್ಲಿ ಪಕ್ಷದಿಂದ ಹೊರಗೆ ಹೋಗುವೆ ಎಂದು ಡಿಕೆಶಿ ಹೇಳಿದ್ದರು. ಆದರೆ ಹಾಗೆ ಆಗಿಲ್ಲ. ಪ್ರಜಾಪ್ರಭುತ್ವದಲ್ಲಿ ಇದೆಲ್ಲವೂ ಸಾಮಾನ್ಯ ಎಂದರು.

ರಾಜ್ಯದಲ್ಲಿ ಬರ ಇದ್ದರೂ ಕೂಡ ಕರ್ನಾಟಕದ ಸರ್ಕಾರದ ಸಚಿವರು, ಶಾಸಕರು ತೆಲಂಗಾಣ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಂವಿಧಾನದ ಪವಿತ್ರ ಹುದ್ದೆಯಾದ ಸ್ಪೀಕರ್ ಹುದ್ದೆಯ ಕುರಿತು ಜಮೀರ್ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ. ಇವೆಲ್ಲವನ್ನೂ ರಾಜ್ಯದ ಜನ ಗಮನಿಸುತ್ತಿದ್ದಾರೆ. ಜಮೀರ್ ವಿರುದ್ದ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!