ಹೊಸದಿಗಂತ ವರದಿ ಮಂಡ್ಯ :
ತಮಿಳುನಾಡಿಗೆ ನಿರಂತರ ನೀರು ಹರಿಸುವಂತೆ ಮತ್ತೆ ಆದೇಶ ಮಾಡಿರುವ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಮತ್ತು ಪ್ರಾಧಿಕಾರ ಹಾಗೂ ಕರ್ನಾಟಕದ ಹಿತ ಕಾಪಾಡುವಲ್ಲಿ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ನಗರದಲ್ಲಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ 59ನೇ ದಿನಕ್ಕೆ ಕಾಲಿಟ್ಟಿದ್ದು, ಚಳವಳಿ ಮುಂದುವರಿದಿದ್ದು, ವಿದ್ಯಾರ್ಥಿಗಳು ಬೆಂಬಲ ನೀಡಿದ್ದರು.
ನಗರದ ಸರ್ ಎಂ.ವಿ. ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಧರಣಿಯಲ್ಲಿ ಮಾಂಡವ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.
ಕಾವೇರಿ ಹೋರಾಟಗಾರರ ಜೊತೆಗೂಡಿದ ವಿದ್ಯಾರ್ಥಿಗಳು ಬೆಂಗಳೂರು ಮೈಸೂರು ಹೆದ್ದಾರಿಗೆ ಇಳಿದು ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಪ್ರತಿಭಟಿಸಿದರು.
ವಿದ್ಯಾರ್ಥಿನಿ ಮೇಘನಾ ಮಾತನಾಡಿ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಆದ ಒಪ್ಪಂದ ಸ್ವಾತಂತ್ರ ನಂತರ ಮುಂದುವರೆದಿದೆ, ಇದುವರೆಗೆ ನಮ್ಮನ್ನ ಹಲವು ಸರ್ಕಾರಗಳು ಆಳ್ವಿಕೆ ಮಾಡಿವೆ ಆದರೆ ನ್ಯಾಯ ದೊರಕಿಸಿಕೊಡುವಲ್ಲಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಧರಣಿ ಸ್ಥಳಕ್ಕೆ ಬಂದು ಹಲವು ಭರವಸೆಗಳನ್ನು ನೀಡಿ ರೈತರ ಹಿತ ಕಾಪಾಡುವುದಾಗಿ ಹೇಳಿದ್ದಾರೆ,ಆದರೆ ಅವರು ವಿಧಾನ ಸೌಧ ತಲುಪುತ್ತಿದ್ದಂತೆ ಆಡಳಿತದಲ್ಲಿ ತಲ್ಲಿನರಾಗಿ ಇದನ್ನು ಮರೆತುಬಿಡುತ್ತಾರೆ, ಚುನಾಯಿತ ಜನಪ್ರತಿನಿಧಿಗಳು ಕಾವೇರಿ ವಿಚಾರವಾಗಿ ದನಿ ಎತ್ತಬೇಕಾಗಿದೆ ಎಂದರು.
ನೀರು ಪ್ರಕೃತಿದತ್ತ ಕೊಡುಗೆ, ನೀರು ಇದ್ದಾಗ ತಾನೇ ತಾನಾಗಿ ಹರಿದು ಹೋಗಿದೆ, ಆದರೆ ತಮಿಳುನಾಡು ಸಂಕಷ್ಟಕಾಲದಲ್ಲಿ ನೀರಿಗಾಗಿ ಹಠಮಾರಿ ಧೋರಣೆ ತಾಳುತ್ತಿರುವುದು ಸರಿಯಲ್ಲ ಎಂದರು.