ಲಾಲು ಪ್ರಸಾದ್​ ಯಾದವ್ ವಿರುದ್ಧ ಕೇಸ್​ ದಾಖಲಿಸಲು ಸಿಬಿಐ ಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಮಿ ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​ ಯಾದವ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕೇಸ್​ ದಾಖಲಿಸಲು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಕೇಂದ್ರ ಸರ್ಕಾರ ಮಂಗಳವಾರ ಅನುಮತಿ ನೀಡಿದೆ.

ಈ ಬಗ್ಗೆ ಸಿಬಿಐ ರೋಸ್​ ಅವೆನ್ಯೂ ಕೋರ್ಟ್​ಗೆ ಮಾಹಿತಿ ನೀಡಿದೆ.ಉದ್ಯೋಗಕ್ಕಾಗಿ ಭೂಮಿ ಹಗರಣ ಕೇಸ್​ ವಿಚಾರಣೆಯ ವೇಳೆ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ, ಕೇಸ್​ ದಾಖಲಿಸಲು ಅನುಮತಿಸಲಾಗಿದೆ. ಒಂದು ವಾರದೊಳಗೆ ಪ್ರಕರಣದ ಇತರ ಆರೋಪಿಗಳ ವಿರುದ್ಧವೂ ವಿಚಾರಣೆ ನಡೆಸಲು ಅನುಮತಿ ಪಡೆಯುವುದಾಗಿ ಸಿಬಿಐ ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದರು.

ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಮತ್ತು ಇತರ ಆರೋಪಿಗಳ ವಿರುದ್ಧ ಸಲ್ಲಿಸಲಾದ ಹೊಸ ಚಾರ್ಜ್ ಶೀಟ್ ಆಧಾರದ ಮೇಲೆ ಪ್ರಕರಣ ವಿಚಾರಣೆ ನಡೆಸಲು ಸಿಬಿಐ ಮುಂದಾಗಿದೆ. ಚಾರ್ಜ್​ಶೀಟ್‌ನಲ್ಲಿ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೆಸರಿದ್ದು, ಅವರ ವಿರುದ್ಧ ನ್ಯಾಯಾಲಯವು ವಿಚಾರಣೆ ನಡೆಸಲಿದೆ.

ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಜುಲೈ 3 ರಂದು ಸಿಬಿಐ ಹೊಸ ಆರೋಪಪಟ್ಟಿಯನ್ನು ಕೋರ್ಟ್​ಗೆ ಸಲ್ಲಿಸಲಾಗಿದೆ. ಇದರಲ್ಲಿ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ಲಾಲು ಪ್ರಸಾದ್​ ಯಾದವ್, ರಾಬ್ಡಿ ದೇವಿ ಮತ್ತಿತರರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಪ್ರಕರಣದಲ್ಲಿ ಲಾಲು, ರಾಬ್ಡಿ ಮತ್ತು ಮಿಸಾ ಭಾರ್ತಿ ಅವರು ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here