ನಕಲಿ ಪಾಸ್‌ಪೋರ್ಟ್‌ ದಂಧೆಗೆ ಬ್ರೇಕ್‌ ಹಾಕಲು ಮುಂದಾದ ಕೇಂದ್ರ ಸರಕಾರ: ಇ – ಪಾಸ್‌ಪೋರ್ಟ್‌ ನತ್ತ ಮೋದಿ ಒಲವು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೇಂದ್ರ ಸರಕಾರ ಎಲೆಕ್ಟ್ರಾನಿಕ್‌ ಚಿಪ್‌ ಅಳವಡಿಸಲಾದ ಹೊಸ ಮತ್ತು ಸುಧಾರಿತ ಪಾಸ್‌ಪೋರ್ಟ್‌ ಅನ್ನು ಬಿಡುಗಡೆ ಮಾಡಲು ಚಿಂತಿಸುತ್ತಿದೆ.

ಈ ಮೂಲಕ ಪಾಸ್‌ಪೋರ್ಟ್‌ ತಿರುಚುವಿಕೆ ಹಾಗೂ ನಕಲಿ ಪಾಸ್‌ಪೋರ್ಟ್‌ ಸೃಷ್ಟಿಸುವ ದಂಧೆಗೆ ಬ್ರೇಕ್‌ ಹಾಕಲು ಮುಂದಾಗಿದೆ.

ಪಾಸ್‌ಪೋರ್ಟ್‌ ಸೇವಾ ದಿನ ಅಂಗವಾಗಿ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಜೈಶಂಕರ್‌, ‘ಪ್ರಧಾನಿ ನರೇಂದ್ರ ಮೋದಿ ಅವರ ಜನಸ್ನೇಹಿ ಕನಸು ಈಡೇರಿಸುವ ಭಾಗವಾಗಿ ಶೀಘ್ರವೇ ನಾವು ಹೊಸ ಮತ್ತು ಸುಧಾರಿತ ಪಾಸ್‌ಪೋರ್ಟ್‌ ಸೇವಾ ಯೋಜನೆಯ ಎರಡನೇ ಹಂತವನ್ನು (ಪಾಸ್‌ಪೋರ್ಟ್‌ ವರ್ಷನ್ 2.0) ಆರಂಭಿಸಲಿದ್ದೇವೆ. ಇದರಿಂದ ಕಾಲಮಿತಿಯಲ್ಲಿ ವಿಶ್ವಾಸಾರ್ಹ, ಪಾರದರ್ಶಕವಾಗಿ ಪಾಸ್‌ಪೋರ್ಟ್‌ ಸಂಬಂಧಿ ಸೇವೆಗಳನ್ನು ನೀಡಲು ಸಾಧ್ಯವಾಗಲಿದೆ’ ಎಂದು ಅವರುಹೇಳಿದ್ದಾರೆ.

EASE (E: ಎನ್‌ಹ್ಯಾನ್ಸ್ಡ್‌ ಪಾಸ್‌ಪೋರ್ಟ್‌ ಸರ್ವೀಸ್‌, A: ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಆಧರಿತ ಸೇವಾ ವಿತರಣೆ, S: ಚಿಪ್‌ ಬೇಸ್ಡ್‌ ಇ ಪಾಸ್‌ಪೋರ್ಟ್‌ನಿಂದಾಗಿ ಸುಲಲಿತ ವಿದೇಶ ಪ್ರವಾಸ ಮತ್ತು E: ಎನ್‌ಹ್ಯಾನ್ಸ್ಡ್‌ ಡಾಟಾ ಸೆಕ್ಯುರಿಟಿ’ ) ಜಾರಿಗೊಳಿಸಲಿದ್ದೇವೆ. ಇದು ಡಿಜಿಟಲ್‌ ವ್ಯವಸ್ಥೆ ಬಳಸಿಕೊಂಡು ಜನರಿಗೆ ಸುಧಾರಿತ ಪಾಸ್‌ಪೋರ್ಟ್‌ ಸೇವೆ ನೀಡಲು ನೆರವಾಗಲಿದೆ, ಕೃತಕ ಬದ್ಧಿಮತ್ತೆ ವ್ಯವಸ್ಥೆ ಆಧರಿತವಾಗಿ ಸೇವೆಯನ್ನು ನೀಡಲಾಗುವುದು, ಚಿಪ್‌ ಆಧರಿತ ಇ ಪಾಸ್‌ಪೋರ್ಟ್‌ನಿಂದ ವಿದೇಶಗಳಿಗೆ ಸುಲಲಿತ ಭೇಟಿ ನೀಡಬಹುದು ಮತ್ತು ಮಾಹಿತಿಯನ್ನು ಇನ್ನಷ್ಟು ಸುರಕ್ಷಿತವಾಗಿ ಇಡಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಇ – ಪಾಸ್‌ಪೋರ್ಟ್‌ ವಿಶೇಷತೆ ಏನು?
ಮೈಕ್ರೋಚಿಪ್‌ ಇರುವ ಇ – ಪಾಸ್‌ಪೋರ್ಟ್‌ ಬೆರಳಚ್ಚು ಹಾಗೂ ಫೇಸ್‌ ರಿಕಗ್ನಿಷನ್‌ನಂಥ ಸುಧಾರಿತ ಅಂಶಗಳನ್ನು ಒಳಗೊಂಡಿರುತ್ತದೆ. ಇದರಿಂದ ಪಾಸ್‌ಪೊರ್ಟ್‌ ತಿರುಚುವಿಕೆ ಹಾಗೂ ನಕಲಿ ಪಾಸ್‌ಪೋರ್ಟ್‌ ಮಾಡುವುದು ಅಸಾಧ್ಯವಾಗಲಿದೆ. ವಿಮಾನ ನಿಲ್ದಾಣಗಳ ಚೆಕ್‌ ಪಾಯಿಂಟ್‌ನಲ್ಲಿ ಪಾಸ್‌ಪೋರ್ಟ್‌ ಹೊಂದಿದವನ ಗುರುತು ದೃಢೀಕರಣ ಸುಲಭವಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!