ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಹಿಂಸಾಚಾರ ಹಿಡಿತಕ್ಕೆ ಸಿಗುತ್ತಿಲ್ಲ. ಈ ಹಿನ್ನೆಲೆ ಕೇಂದ್ರ ಸರ್ಕಾರ 900ಕ್ಕೂ ಹೆಚ್ಚು ಭದ್ರತಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ.
ಕೇಂದ್ರ ಸರ್ಕಾರದ ಗೃಹ ಸಚಿವಾಲಯವು 10ಕ್ಕೂ ಹೆಚ್ಚು ಕಂಪನಿಗಳ 900ಕ್ಕೂ ಹೆಚ್ಚು ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಿದೆ . ಈ 900 ಯೋಧರ ಪೈಕಿ ಪ್ಯಾರಾ ಮಿಲಿಟರಿ ಪಡೆ, ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಹಾಗೂ ಎಸ್‌ಎಸ್‌ಬಿ ಪಡೆಗಳ ಯೋಧರೂ ಸೇರಿದ್ದಾರೆ.
ಶನಿವಾರ ರಾತ್ರಿಯೇ 900 ಯೋಧರು ಮಣಿಪುರ ರಾಜಧಾನಿ ಇಂಫಾಲ್‌ಗೆ ಆಗಮಿಸಿದ್ದಾರೆ. ಮಣಿಪುರ ರಾಜ್ಯದ ಹಲವು ಜಿಲ್ಲೆಗಳಿಗೆ ಈ ಯೋಧರನ್ನು ರವಾನಿಸಲಾಗಿದೆ. ಭಾನುವಾರದಿಂದಲೇ ಈ ಯೋಧರು ಕಾರ್ಯಾರಂಭ ಮಾಡಿದ್ದಾರೆ.
ಮೇ 3 ರಂದು ಮಣಿಪುರದಲ್ಲಿ ಜನಾಂಗೀಯ ಸಂಘರ್ಷ ಆರಂಭವಾದ ದಿನದಿಂದ ಹಿಡಿದು ಇಲ್ಲಿಯವರೆಗೆ 40 ಸಾವಿರಕ್ಕೂ ಹೆಚ್ಚು ಸೇನಾ ಪಡೆ ಯೋಧರನ್ನು ಮಣಿಪುರಕ್ಕೆ ರವಾನೆ ಮಾಡಲಾಗಿದೆ. ಕೇಂದ್ರ ಗೃಹ ಸಚಿವಾಲಯವು ಶತಾಯಗತಾಯ ಹಿಂಸಾಚಾರನ್ನು ಹತ್ತಿಕ್ಕಲೇ ಬೇಕು ಎಂದು ನಿರ್ಧರಿಸಿದ್ದು, ಅಸ್ಸಾಂ ರೈಫಲ್ಸ್, ಕೇಂದ್ರೀಯ ಶಸ್ತ್ರಾಸ್ತ್ರ ಪೊಲೀಸ್ ಪಡೆ ಸೇರಿದಂತೆ ಹಲವು ವಿಭಾಗಗಳ ಯೋಧರನ್ನು ಮಣಿಪುರದಲ್ಲಿ ನಿಯೋಜನೆ ಮಾಡಿದೆ.