August 30, 2026
Sunday, August 30, 2026
spot_img

ಚಿತ್ರದುರ್ಗದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಬದ್ಧ; ಮುಂದಿನ 9 ತಿಂಗಳಲ್ಲಿ 33 ರೈಲ್ವೆ ಸೇತುವೆ ಕಾಮಗಾರಿ ಪೂರ್ಣ: ವಿ.ಸೋಮಣ್ಣ

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಕೈಗೆತ್ತಿಕೊಳ್ಳಲಾಗಿರುವ ಒಟ್ಟು 33 ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆ ಕಾಮಗಾರಿಗಳನ್ನು ಮುಂದಿನ 8 ರಿಂದ 9 ತಿಂಗಳ ಅವಧಿಯಲ್ಲಿ ಸಂಪೂರ್ಣವಾಗಿ ಮುಗಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಭರವಸೆ ನೀಡಿದರು.

ನಗರದ ರೈಲ್ವೇ ನಿಲ್ದಾಣದ ಹತ್ತಿರದ ಲೆವೆಲ್ ಕ್ರಾಸಿಂಗ್ ಸಂಖ್ಯೆ 22 ಬದಲಾಗಿ ನಿರ್ಮಿಸಲಾಗುತ್ತಿರುವ ನೂತನ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಜಾಲದ ಅಭಿವೃದ್ಧಿ ಬೆನ್ನೆಲುಬಾಗಿವೆ. ವಿಶ್ವದ ಭೂಪಟದಲ್ಲಿ ಭಾರತವನ್ನು ಮುಂಚೂಣಿಯಲ್ಲಿ ನಿಲ್ಲಿಸಲು ಸಾರಿಗೆ ಮೂಲಸೌಕರ್ಯಗಳಿಗೆ ಅತ್ಯಂತ ಹೆಚ್ಛಿನ ಆದ್ಯತೆ ನೀಡಲಾಗುತ್ತಿದೆ. ದೇಶಾದ್ಯಂತ ರೈಲ್ವೆ ವಿದ್ಯುದ್ದೀಕರಣ ಶೇ.99ರಷ್ಟು ಪೂರ್ಣಗೊಂಡಿದ್ದು, ಈ ವರ್ಷದ ಕೊನೆಯೊಳಗೆ ಶೇ.100ರಷ್ಟು ಸಾಧಿಸಿ ವಿಶ್ವ ದಾಖಲೆ ಬರೆಯಲಾಗುವುದು. ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದ್ದೀಕರಣ ಕಾರ್ಯ 2 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ವೇಳೆಗೆ ಕರ್ನಾಟಕ ಶೇ.100ರಷ್ಟು ರೈಲ್ವೆ ವಿದ್ಯುದ್ದೀಕರಣ ಸಾಧಿಸಿದ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾಗಲಿದೆ ಎಂದರು.

 ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿ ಪ್ರಮುಖ ಸೇತುವೆಗಳು, ಎಲ್‍ಸಿ ಗೇಟ್‍ಗಳ ಮೇಲ್ಸೇತುವೆ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.

 ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಕರ್ನಾಟಕದ ರೈಲ್ವೆ ಯೋಜನೆಗಳಿಗಾಗಿ ರೂ. 52,000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ಹೊಸ ರೈಲ್ವೇ ಯೋಜನೆಗಳಿಗೆ ರೂ.15,000 ಕೋಟಿ ನೀಡಲಾಗಿದೆ. ಗದಗ-ವಾಡಿ, ಗಿಣಿಗೆರಾ-ರಾಯಚೂರು, ಶಿವಮೊಗ್ಗ-ರಾಣೆಬೆನ್ನೂರು, ಕಡೂರು-ಚಿಕ್ಕಮಗಳೂರು-ಬೇಲೂರು ಹಾಗೂ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗಗಳ ಕಾಮಗಾರಿಗಳು ಭರದಿಂದ ಸಾಗಿವೆ.

ಚಿಕ್ಕಜಾಜೂರು-ಬಳ್ಳಾರಿ ಡಬ್ಲಿಂಗ್ ಯೋಜನೆಗೆ ರೂ. 3,340 ಕೋಟಿ ಮಂಜೂರು ಮಾಡಲಾಗಿದೆ. ಹಿಂದೆ ರಾಜ್ಯದ ರೈಲ್ವೆ ಯೋಜನೆಗಳಿಗೆ ವಾರ್ಷಿಕ ರೂ.380 ರಿಂದ ರೂ.400 ಕೋಟಿ ನೀಡಲಾಗುತ್ತಿತ್ತು. ಆದರೆ, ಈಗ ಪ್ರತಿ ವರ್ಷ ರೂ.7,500 ರಿಂದ ರೂ. 8,000 ಕೋಟಿ ಅನುದಾನ ನೀಡಲಾಗುತ್ತಿದೆ. ರಾಜ್ಯದ ಸುಮಾರು 62 ರೈಲ್ವೆ ಸ್ಟೇಷನ್‍ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

ಇದನ್ನೂ ಓದಿ:

ಜಿಲ್ಲೆಯ ಬಹುವರ್ಷಗಳ ಕನಸಿನ ಯೋಜನೆಯಾದ ತುಮಕೂರು – ಚಿತ್ರದುರ್ಗ – ದಾವಣಗೆರೆ ನೂತನ ನೇರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಈಗಾಗಲೇ ಶೇ. 92 ರಷ್ಟು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಬಾಕಿ ಇರುವ ಶೇ.8 ರಷ್ಟು ಜಮೀನನ್ನು ಜಿಲ್ಲಾಡಳಿತ ಶೀಘ್ರವೇ ಹಸ್ತಾಂತರಿಸಿದರೆ, ಮುಂದಿನ ಒಂದೂವರೆ ವರ್ಷದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು.

ಇದಲ್ಲದೆ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿ ಚಿತ್ರದುರ್ಗ ಹಾಗೂ ಚಿಕ್ಕಜಾಜೂರು ರೈಲ್ವೆ ನಿಲ್ದಾಣಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗುತ್ತಿದೆ. ತುಮಕೂರು – ರಾಯದುರ್ಗ ಹಾಗೂ ಚಿತ್ರದುರ್ಗ ಭಾಗದ ಪ್ರಮುಖ ರೈಲು ಮಾರ್ಗಗಳ ಕಾಮಗಾರಿಗಳನ್ನು ವೇಗಗೊಳಿಸಲಾಗಿದ್ದು, 2027ರ ಡಿಸೆಂಬರ್ ಅಂತ್ಯದ ವೇಳೆಗೆ ಯೋಜನೆಯನ್ನು ಸಂಪೂರ್ಣವಾಗಿ ಮುಕ್ತಾಯಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !