ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ವಿಶ್ವವನ್ನೇ ಬೆರಗುಗೊಳಿಸುವ ಜಮ್ಮು ಕಾಶ್ಮೀರದ ‘ಚೆನಾಬ್’ ರೈಲ್ವೆ ಸೇತುವೆ ನಿರ್ಮಾಣದ ಹಿಂದೆ ಬೆಂಗಳೂರಿನ ಐಐಎಸ್‌ಸಿ ಪ್ರೊಫೆಸರ್‌ನ ಸತತ 17 ವರ್ಷಗಳ ಮಾರ್ಗದರ್ಶನವಿದೆ ಎಂಬ ವಿಚಾರ ಗೊತ್ತಿದೆಯೇ?
ಹೌದು, ಇವರು ಮಾಧವಿ ಲತಾ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕಿಯಾದ ಇವರು, ಚೆನಾಬ್ ಸೇತುವೆ ನಿರ್ಮಾಣ ಯೋಜನೆಯಲ್ಲಿ 17 ವರ್ಷಗಳ ಕಾಲ ಭೂತಾಂತ್ರಿಕ ಸಲಹೆಗಾರರಾಗಿ ತೊಡಗಿಸಿಕೊಂಡಿದ್ದರು. ಸೇತುವೆಯ ಗುತ್ತಿಗೆಪಡೆದಿದ್ದ ಆಫ್ಕಾನ್ಸ್ ಸಂಸ್ಥೆಯ ಮನವಿಯ ಮೇರೆಗೆ ಅವರು ನಿರ್ಮಾಣ ಕಾಮಗಾರಿ, ಇಳಿಜಾರು ಸ್ಥಿರೀಕರಣ, ಸೇತುವೆ ಅಡಿಪಾಯದ ಕುರಿತು ಮಾರ್ಗದರ್ಶನ ಮಾಡಿದ್ದಾರೆ.
ಇಲ್ಲಿ ಸೇತುವೆಯ ತಳಭಾಗದ ಬಂಡೆಗಳ ನಡುವೆ ಹೆಚ್ಚಿನ ಅಂತರವಿದೆ. ಜೊತೆಗೆ ಇಳಿಜಾರು ಪ್ರದೇಶವೂ ಕಡಿದಾಗಿದೆ. ಇಲ್ಲಿ ಇಳಿಜಾರುಗಳಲ್ಲಿ ಕಮಾನು ಆಧಾರಸ್ತಂಭಗಳು, ಕಂಬಗಳಿಗೆ ಅಡಿಪಾಯ ನಿರ್ಮಾಣವು ಪ್ರಾಥಮಿಕ ಸವಾಲುಗಳಲ್ಲಿ ಒಂದಾಗಿತ್ತು. ಜೊತೆಗೆ ಗಂಟೆಗೆ 220 ಕಿ.ಮೀ. ವೇಗದಲ್ಲಿ ಬೀಸುವ ಗಾಳಿಯ ಹೊಡೆತ ತಡೆದುಕೊಳ್ಳಲು ಸೇತುವೆಯ ಅಡಿಪಾಯ ಹೆಚ್ಚು ಆಳದಿಂದಲೇ ಅಗಲವಾಗಿ ಮಾಡಲಾಗಿತ್ತು. ಅಲ್ಲದೆ ಈ ಸೇತುವೆ ಇರುವ ಪ್ರದೇಶ ಭೂಕಂಪನ ವಲಯದಲ್ಲಿ ಬರುತ್ತಿರುವುದು ಕೂಡಾ ಎಂಜಿನಿಯರ್‌ಗಳಿಗೆ ಹೆಚ್ಚಿನ ಸವಾಲು ಒಡ್ಡಿತ್ತು. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವಿನ್ಯಾಸ ಮಾರ್ಪಾಡು ಮಾಡಿದ್ದೇವೆ ಎನ್ನುತ್ತರಾರೆ ಮಾಧವಿ ಲತಾ.
ಮಾಧವಿ ಲತಾ ಅವರ ಬಗ್ಗೆ…
1992ರಲ್ಲಿ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಬಿ.ಟೆಕ್ ಪದವಿ ಗಳಿಸಿದ ಮಾಧವಿ ಲತಾ, ಬಳಿಕ ತೆಲಂಗಾಣದ ವಾರಂಗಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಭೂತಾಂತ್ರಿಕ ಎಂಜಿನಿಯರಿಂಗ್‌ನಲ್ಲಿ ಎಂ.ಟೆಕ್‌ನಲ್ಲಿ ಚಿನ್ನದ ಪದಕ, 2000ನೇ ಇಸವಿಯಲ್ಲಿ ಐಐಟಿ ಮದ್ರಾಸ್‌ನಿಂದ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
2021ರಲ್ಲಿ ಅವರಿಗೆ ಭಾರತೀಯ ಭೂತಾಂತ್ರಿಕ ಸೊಸೈಟಿಯಿಂದ ಅತ್ಯುತ್ತಮ ಮಹಿಳಾ ಭೂತಾಂತ್ರಿಕ ಸಂಶೋಧಕಿ ಪ್ರಶಸ್ತಿ ನೀಡಲಾಗಿದೆ. 2022ರಲ್ಲಿ ಅವರು ಭಾರತದ ಸ್ಟೀಮ್‌ನಲ್ಲಿ ಟಾಪ್ 75 ಮಹಿಳೆಯರಲ್ಲಿ ಒಬ್ಬರಾಗಿ ಗುರುತಿಸಲ್ಪಟ್ಟಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ