ಶಿಕ್ಷಕಿ ಸಿಟ್ಟಿಗೆ ಮಗು ಭವಿಷ್ಯವೇ ಹೋಯ್ತು! ಕೋಪದಲ್ಲಿ ವಿದ್ಯಾರ್ಥಿ ಕಣ್ಣಿಗೆ ಕೋಲು ಎಸೆದ ಟೀಚರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವಿದ್ಯಾರ್ಥಿಯ ಬಾಳಿಗೆ ಬೆಳಕು ಆಗಬೇಕಾದ ಶಿಕ್ಷಕಿ ಒಬ್ಬರು, ವಿದ್ಯಾರ್ಥಿಯ ಬಾಳು ಕತ್ತಲಾಗುವಂತೆ ಮಾಡಿದ ಆರೋಪ ಕೇಳಿ ಬಂದಿದೆ.

ಶಿಕ್ಷಕಿ ಸಿಟ್ಟಿನ ಭರದಲ್ಲಿ ಎಸೆದ ಕೋಲು ಆರು ವರ್ಷದ ಬಾಲಕನ ಬಲಗಣ್ಣಿಗೆ ತಗುಲಿ ಉಂಟಾದ ಗಾಯದಿಂದಾಗಿ ಈಗ ಸಂಪೂರ್ಣ ದೃಷ್ಟಿ ಕಳೆದುಕೊಂಡಿದ್ದಾನೆ. ಒಂದು ವರ್ಷದ ಹಿಂದೆ ಶಿಕ್ಷಕಿ ತರಗತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಕೋಲು ಎಸೆದಿದ್ದು, ಅದು ಆಕಸ್ಮಿಕವಾಗಿ ಈ ಬಾಲಕನ ಕಣ್ಣಿಗೆ ತಗುಲಿದೆ ಎಂದು ಆರೋಪಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಶಿಕ್ಷಕಿ ಮತ್ತು ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.‌ ಕಳೆದ ವರ್ಷ ಮಾರ್ಚ್ 6 ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸರ್ಕಾರಿ ಶಾಲೆಯ 1ನೇ ತರಗತಿಯಲ್ಲಿ ಈ ಘಟನೆ ನಡೆದಿದ್ದು, ಅಂದು ಗಾಯಗೊಂಡಿದ್ದ ಯಶ್ವಂತ್ ಎಂಬ ವಿದ್ಯಾರ್ಥಿ ಈಗ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ವಿದ್ಯಾರ್ಥಿಗಳನ್ನು ನಿಯಂತ್ರಿಸುವಾಗ, ಶಿಕ್ಷಕಿ ಕುಳಿತ ಜಾಗದಿಂದಲೇ ಸಿಟ್ಟಿನಿಂದ ಕೆಲವರ ಮೇಲೆ ಕೋಲು ಎಸೆದಿದ್ದಾರೆ. ಅದು ಆಕಸ್ಮಿಕವಾಗಿ ಯಶ್ವಂತ್ ಅವರ ಬಲಗಣ್ಣಿಗೆ ತಗುಲಿತ್ತು.

ಆರಂಭದಲ್ಲಿ, ಈ ಗಾಯದ ಪರಿಣಾಮ ಇಷ್ಟು ದೀರ್ಘಕಾಲ ಇರುತ್ತದೆ ಎಂದು ಆತನ ಹೆತ್ತವರಿಗೆ ತಿಳಿದಿರಲಿಲ್ಲ. ಆದರೆ ಕೆಲವು ದಿನಗಳ ನಂತರ ಆತನ ಕಣ್ಣಿನ ಆರೋಗ್ಯ ಸ್ಥಿತಿ ಹದಗೆಟ್ಟಾಗ, ಪೋಷಕರು ಮಗುವನ್ನು ಚಿಂತಾಮಣಿಯ ನೇತ್ರಶಾಸ್ತ್ರಜ್ಞರ ಬಳಿಗೆ ಕರೆದೊಯ್ದಿದ್ದಾರೆ. ಅವರು ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಬಾಲಕನ ಕಣ್ಣನ್ನು ಪರೀಕ್ಷಿಸಿದ ನಂತರ ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು. ಆದರೆ ಬಾಲಕನ ಸ್ಥಿತಿ ಸುಧಾರಿಸದಿದ್ದಾಗ, ಬಾಲಕನ ಪೋಷಕರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಪರೀಕ್ಷೆಯ ನಂತರ ಬಲಗಣ್ಣಿನಲ್ಲಿ ದೃಷ್ಟಿ ಕಳೆದುಕೊಂಡಿದ್ದಾನೆ ಎಂದು ವೈದ್ಯರು ತಿಳಿಸಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದರ ನಂತರ, ಪೋಷಕರು ಮತ್ತು ಸ್ಥಳೀಯರು ಭಾನುವಾರ ಸಂಜೆ ಬಟ್ಲಹಳ್ಳಿ ಪೊಲೀಸ್ ಠಾಣೆ ಹೊರಗೆ ಪ್ರತಿಭಟನೆ ನಡೆಸಿದರು. ನಂತರ ಘಟನೆಗೆ ಸಂಬಂಧಿಸಿದಂತೆ ಆರೋಪಿ ಶಿಕ್ಷಕಿ ಮತ್ತು ತಾಲ್ಲೂಕು ಬ್ಲಾಕ್ ಶಿಕ್ಷಣ ಅಧಿಕಾರಿ ಸೇರಿದಂತೆ ಇತರ ಐದು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!