ಬಹಳ ಪ್ರಾಚೀನ ಕರ್ನಾಟಕವೆಂಬ ಪರಿಕಲ್ಪನೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದು ಕನ್ನಡಿಗರ ಅಸ್ಮಿತೆ, ನಮ್ಮ ಹೆಮ್ಮೆ. ಭವ್ಯ ಇತಿಹಾಸ ಇರುವ ನಮ್ಮ ಭಾಷೆ, ಶ್ರೀಮಂತ ಪ್ರಾಕೃತಿಕ ಸೌಂದರ್ಯ ಹೊಂದಿರುವ ನಮ್ಮ ಕರುನಾಡು, ಸಾಹಿತಿಗಳ ಬೀಡು, ವೈವಿಧ್ಯತೆಯ ತವರೂರು. ಕಲೆ, ಜ್ಞಾನಕ್ಕೆ ಹೆಸರಾಗಿರುವ ಕನ್ನಡ ನಾಡಿಗೆ ಸುಮಾರು 2000 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.
“ಪುಟ್ಟದಿರ್ದೊಡೆ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ನಂದನವನದೊಳ್ ಕನ್ನಡ ದೇಶದೊಳ್ ಅರಂಕುಶವಿಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದು ತನ್ನ ವಿಕ್ರಮಾರ್ಜುನ ವಿಜಯಂ ಕಾವ್ಯದಲ್ಲಿ ಕನ್ನಡ ನಾಡಿನ ಹಿರಿಮೆಯನ್ನು ಸಾರುತ್ತಾನೆ ಆದಿಕವಿ ಪಂಪ. ಕನ್ನಡ ನಾಡನ್ನು ಆಳಿದ ಹಲವು ಮಹಾ ಸಾಮ್ರಾಜ್ಯಗಳು ಹಾಗೂ ರಾಜವಂಶದವರು ಕನ್ನಡ ನಾಡಿನ ಸಂಸ್ಕೃತಿ, ಹಿರಿಮೆ, ಕಲಾಸಂಪತ್ತು ಹಾಗೂ ಜ್ಞಾನವನ್ನು ದೇಶದ ಉದ್ದಗಲಕ್ಕೂ ಪಸರಿಸಿದ್ದಾರೆ. ಕ್ರಿ. ಶ. 6ನೇ ಶತಮಾನದ ಬಾದಾಮಿಯ ಚಾಲುಕ್ಯರ ದೊರೆ ಇಮ್ಮಡಿ ಪುಲಕೇಶಿಯನ್ನು ‘ಕರ್ಣಾಟೇಶ್ವರ’, ‘ದಕ್ಷಿಣ ಪಥೇಶ್ವರ, ‘ಕನ್ನಡದ ಕುಲತಿಲಕ’ ಎಂಬಿತ್ಯಾದಿ ಬಿರುದುಗಳಿಂದಲೂ, ಅವರ ನೌಕಾ ಸೇನಾಪಡೆಯನ್ನು ‘ಕರ್ಣಾಟ ಬಲ’ ಎಂಬ ಹೆಸರುಗಳಿಂದಲೂ ಬಣ್ಣಿಸಲಾಗುತ್ತಿತ್ತು.
ಪ್ರಾಚೀನ ಕಾಲದಿಂದಲೂ ʼಕರ್ನಾಟʼ ಪದದ ಉಲ್ಲೇಖಗಳನ್ನು ಗಮನಿಸಬಹುದು. ಕನ್ನಡನಾಡನ್ನು ಕರ್‌ನಾಡು, ಕರುನಾಡು, ಕಮ್ಮಿತು ನಾಡು, ಕಪ್ಪು ನಾಡು, ಎತ್ತರದ ನಾಡು, ಕಂಪಿನ ನಾಡು ಎಂದು ಹಲವು ಪುರಾತನ ಸಾಕ್ಷ್ಯಗಳಲ್ಲಿ ಉಲ್ಲೇಖಿಲಾಗಿದೆ.
ದೆಹಲಿಯ ಸುಲ್ತಾನರಾದ ಮೊಘಲ್ ದೊರೆಗಳೂ ಕೂಡ ಇಡೀ ದಕ್ಷಿಣ ಭಾರತವನ್ನು ‘ಕರ್ನಾಟಿಕ್’ ಎಂದೇ ಸಂಬೋಧಿಸುತ್ತಿದ್ದರು. 1697 ರಿಂದ 1801 ರ ವರೆಗೆ ಈಗಿನ ತಮಿಳುನಾಡಿನ ಅರ್ಕಾಟಿಕ್‌ ಭಾಗಗಳನ್ನು ಆಡಿದ ನವಾಬರನ್ನು ಕರ್ಣಾಟಿಕ್ ನವಾಬ ಅಂತಲೇ ಕರೆಯುತ್ತಿದ್ದರು ಎಂದರೆ ಆ ಕಾಲದಲ್ಲಿ ಕನ್ನಡ ನಾಡಿಗೆ ಇದ್ದ ಮಹತ್ವವನ್ನು ಅರ್ಥೈಸಿಕೊಳ್ಳಬಹುದು. ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಸಹ  ʼಕರುನಾಟ್ʼ ಎಂಬ ಶಬ್ದ ಪ್ರಯೋಗವನ್ನು ಗಮನಿಸಬಹುದು.
ಕನ್ನಡ ನಾಡಿನ ಹಿರಿಮೆ- ಗರಿಮೆಗಳನ್ನು ಮತ್ತೊಂದು ಹಂತಕ್ಕೆ ಮುಟ್ಟಿಸಿದವರು ವಿಜಯನಗರದ ಅರಸರು. ಆ ಕಾಲದಲ್ಲಿ ನಾಡು ಧೀರ ಕ್ಷಾತ್ರೀಯ ಗುಣಗಳಿಂದ, ಸಂಪತ್ತು, ಜ್ಞಾನ ಸಮೃದ್ಧಿಯಿಂದ ವೈಭವದ ತುತ್ತ ತುದಿಯನ್ನು ತಲುಪಿತ್ತು. ಈ ಸಾಮ್ರಾಜ್ಯವನ್ನು ಅಖಂಡ ಭಾರತದಲ್ಲಿ ಕರ್ನಾಟ ಸಾಮ್ರಾಜ್ಯ, ಕರ್ನಾಟಕ ಸಾಮ್ರಾಜ್ಯ ಹಾಗೂ ಚಾರುಕರ್ನಾಟದೇಶ ಎಂದು ಕರೆಯಲಾಗುತ್ತಿತ್ತು. ವಿಜಯನಗರವು ಕರ್ನಾಟ ದೇಶದ ಮಹಾರಾಜಧಾನಿ ಎಂದು ಶಾಸನದಲ್ಲಿ ಉಲ್ಲೇಖಿಸಲ್ಪಟ್ಟಿದೆ. ವಿಜಯ ನಗರವು ಕರ್ನಾಟ ದೇಶದ ವಿದ್ಯಾನಗರಿಯಲ್ಲಿತ್ತು ಎಂದು ಹೇಳಲಾಗಿದೆ.
ವಿಜಯನಗರದ ಆರಂಭದಿಂದ ಕೊನೆಯವರೆಗೆ ಆಳಿದ ಅರಸರು ಕರ್ನಾಟ ದೇಶದ ಅರಸರೆಂದೇ ಕರೆಸಿಕೊಂಡಿದ್ದಾರೆ. ಬುಕ್ಕರಾಯ ‘ಕರ್ನಾಟ ಕ್ಷಿತಿನಾಥ’, ವಿರೂಪಾಕ್ಷರಾಯ ‘ಕರ್ನಾಟೇಶ್ವರ ರಾಯಕುಂಜರ’ ಎಂಬ ಬಿರುದುಗಳಿಂದ ಅಲಂಕರಿಸಲ್ಪಟ್ಟಿದ್ದಾರೆ. ಮತ್ತೋರ್ವ ಅರಸು ಅಚ್ಯುತರಾಯರಿಗೆ ‘ಕರ್ನಾಟಕ ದೇಶಾಧಿಪತಿ’, ‘ಕರ್ನಾಟ ರಾಜ್ಯಲಕ್ಷೀಮನೋಹರ ಎಂಬ ಬಿರುದುಗಳಿದ್ದವು.
ಭಾರತ ಇತಿಹಾಸದ ಶ್ರೇಷ್ಠ ದೊರೆಗಳಲ್ಲೊಬ್ಬರಾದ ಶ್ರೀಕೃಷ್ಣದೇವರಾಯರನ್ನು ‘ಕರ್ನಾಟಕರತ್ನ ಸಿಂಹಾಸನಾಧೀಶ್ವರ’, ‘ಕನ್ನಡರಾಜ್ಯ ರಮಾರಮಣ’, ‘ಕರ್ನಾಟ ಮಹೀಶ’ ಹಾಗೂ ‘ಕರ್ನಾಟಕ ಸಾಮ್ರಾಜ್ಯದ ಮುಕುಟಮಣಿ’ ಎಂಬಿತ್ಯಾದಿ ಬಿರುದುಗಳನ್ನು ನೀಡಿ ಬಣ್ಣಿಸಲಾಗಿದೆ. ಇನ್ನೊಂದು ವಿಶೇಷವೆಂದರೆ ವಿಜಯನಗರ ರಾಜಧಾನಿಯಾಗಿದ್ದ ಕರ್ನಾಟ ಸಾಮ್ರಾಜ್ಯವನ್ನು ಬ್ರಿಟಿಷರು ಹಾಗೂ ಪೋರ್ಚುಗೀಸರು ಸಹ ಕರ್ನಾಟಕ ಎಂದೇ ಕರೆಯುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!