ಹೊಸದಿಗಂತ ಡಿಜಿಟಲ್ ಡೆಸ್ಕ್:
2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದೆ. ಆದಾಗ್ಯೂ, ಇತರ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬಿತ್ತನೆ ಬೀಜಗಳ ದರ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬರಗಾಲದಿಂದ ಬೀಜೋತ್ಪಾದನೆ ಕುಂಠಿತವಾದ ಕಾರಣ ದರ ಹೆಚ್ಚಳವಾಗಿದೆ. ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023 ಕ್ಕೆ ಹೋಲಿಸಿದರೆ ಈ ಬಾರಿ ಗರಿಷ್ಠ ಶೇ.48.50 ರಷ್ಟಿದೆ. ದರ ಹೆಚ್ಚಳದಿಂದಾಗಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಈ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ನಮ್ಮ ರಾಜ್ಯದಲ್ಲಿಯೇ ಬಿತ್ತನೆ ಬೀಜಗಳ ಬೆಳೆ ಕಡಿಮೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಯಾ ಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್-1 ದರವು ರೂ.8500/- ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು ರೂ.7270/- ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ. 25,000/- ಇದ್ದು ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ ರೂ.17,900/- ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ ರೂ.23,500/- ರೂ. 14,000/- ಇದ್ದು ಕರ್ನಾಟಕದಲ್ಲಿ ಕ್ರಮವಾಗಿ ರೂ.18,600/- ರೂ.12,500/- ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.