ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನಿಂದ ಕಾಶ್ಮೀರ ಸಂಪರ್ಕಿಸುವ ಹೊಸ ಯುಎಸ್‌ಬಿಆರ್‌ಎಲ್ ರೈಲು ಮಾರ್ಗ ಲೋಕಾರ್ಪಣೆಗೆ ಸಿದ್ದಗೊಂಡಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಈ ರೈಲು ಮಾರ್ಗ ಕಾಶ್ಮೀರವನ್ನು ಉಳಿದ ಭಾರತದ ಜೊತೆ ಬೆಸೆಯುವ ಕೊಂಡಿಯಾಗಿದೆ.
ಏಪ್ರಿಲ್ 19 ರಂದು ಪ್ರಧಾನಿ ಮೋದಿ ಅವರು ಹೊಸ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಅಂದು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅವರು ಉದ್ಘಾಟಿಸಲಿದ್ದಾರೆ. ಅಲ್ಲದೇ ಅವರು ಕಾತ್ರಾದಿಂದ ಕಾಶ್ಮೀರವರೆಗೆ ಇದೇ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಇದರ ಪ್ರಯುಕ್ತ ಇಂದು ವಿಶೇಷ ವಂದೇ ಭಾರತ್ ರೈಲು ಜಮ್ಮು ವಲಯದ ಕಾತ್ರಾದ ಶ್ರೀ ಮಾತಾ ವೈಷ್ಣೋದೇವಿ ರೈಲ್ವೆ ನಿಲ್ದಾಣದಿಂದ (SVDK) ಕಾಶ್ಮೀರ ವಲಯದ ಶ್ರೀನಗರದ ಬುದ್‌ಗಾಮ್ ರೈಲ್ವೆ ನಿಲ್ದಾಣದ ತನಕ ಯಶಸ್ವಿ ಪ್ರಯೋಗಾರ್ಥ ಸಂಚಾರವನ್ನು ಪೂರ್ಣಗೊಳಿಸಿದೆ.
ಇದು ಜಮ್ಮು ಕಾಶ್ಮೀರಕ್ಕೆ ಸಿಕ್ಕ ಮೊದಲ ವಂದೇ ಭಾರತ್ ರೈಲು. ಅಲ್ಲಿನ ಹವಾಗುಣವನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ಈ ವಂದೇ ಭಾರತ್ ವಿಶೇಷ ರೈಲನ್ನು ಅಭಿವೃದ್ಧಿಪಡಿಸಲಾಗಿದೆ.