ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಬಸ್ನಲ್ಲಿ ಸಣ್ಣ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳಬೇಕು ಎಂದು ಕಂಡಕ್ಟರ್ ಕ್ಯಾತೆ ತೆಗೆದರೆ ಅಪ್ಪ-ಅಮ್ಮ ಜಗಳವಾಡುತ್ತಾರೆ. ಆದರೆ, ವಿಮಾನ ಪ್ರಯಾಣ ಮಾಡುವಾಗಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಸಿಕೊಂಡಿರುತ್ತಾರೆ. ಹೀಗಿರುವಾಗ ಮಗುವಿಗೂ ಟಿಕೆಟ್ ತೆಗೆದುಕೊಳ್ಳಬೇಕೆಂದು ಅಲ್ಲಿ ತಗಾದೆ ತೆಗೆದರೆ ಪೋಷಕರು ಏನು ಮಾಡುತ್ತಾರೆ? ಗೊತ್ತಾ .
ಇಸ್ರೇಲ್‌ನ ವಿಮಾನ ನಿಲ್ದಾಣದಲ್ಲೂ (Israel Airport) ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಚಿಕ್ಕ ಮಗುವಿಗೂ ಟಿಕೆಟ್ ಖರೀದಿಸಬೇಕೆಂದು ಟಿಕೆಟ್ ಕೌಂಟರ್ನವರು ಹೇಳಿದ್ದರಿಂದ ಗಂಡ-ಹೆಂಡತಿ ಟಿಕೆಟ್ ಖರೀದಿಸುವ ಬದಲು ತಮ್ಮ ಮಗುವನ್ನೇ ಆ ಕೌಂಟರ್‌ನಲ್ಲಿ ಬಿಟ್ಟು ಹೋಗಿದ್ದಾರೆ.
ಇಸ್ರೇಲ್‌ನ ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ಮಗುವಿಗೆ ಟಿಕೆಟ್ ಇಲ್ಲದ ಕಾರಣ ಆ ಮಗುವಿನ ಅಪ್ಪ-ಅಮ್ಮ ತಮ್ಮ ಶಿಶುವನ್ನು ಅಲ್ಲೇ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ. ಆ ಪೋಷಕರು ಯಾರೆಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಆದರೆ, ಅವರನ್ನು ಹಿಡಿದು ನಿಲ್ಲಿಸಿ ಮಗುವನ್ನು ಅವರಿಗೆ ಒಪ್ಪಿಸಲಾಗಿದೆ.
ದಂಪತಿಗಳು ತಮ್ಮ ಮಗುವನ್ನು ಬಿಟ್ಟು ಹೋಗುವಾಗ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ಬೆಲ್ಜಿಯಂನ ಬ್ರಸೆಲ್ಸ್‌ಗೆ ರೈನೈರ್ ಏರ್‌ಲೈನ್ಸ್ ವಿಮಾನದಲ್ಲಿ ಚೆಕ್ ಇನ್ ಆಗಿದ್ದರು. ಈ ವೇಳೆ ಮಗುವನ್ನು ಅಲ್ಲೇ ಬಿಟ್ಟ ಅವರು ತಾವಿಬ್ಬರೇ ವಿಮಾನವೇರಲು ಹೊರಟಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಚೆಕ್-ಇನ್ ಕೌಂಟರ್‌ನಲ್ಲಿದ್ದ ಅಧಿಕಾರಿ ವಿಮಾನ ನಿಲ್ದಾಣದ ಭದ್ರತೆಯನ್ನು ಎಚ್ಚರಿಸಿದ್ದಾರೆ. ಅವರು ಆ ಪೋಷಕರನ್ನು ಹಿಡಿದು ವಿಮಾನ ಹತ್ತದಂತೆ ತಡೆದಿದ್ದಾರೆ.
ಅಂತಿಮವಾಗಿ ವಿಮಾನದ ಚೆಕ್-ಇನ್ ಮುಗಿದ ನಂತರ ದಂಪತಿಗಳು ವಿಮಾನಕ್ಕೆ ತಡವಾಗಿ ಬಂದರು. ಪೊಲೀಸರು ಮಗುವನ್ನು ಪೋಷಕರ ಕೈಗೆ ಒಪ್ಪಿಸಿದ್ದಾರೆ.