ಹೊಸದಿಗಂತ ವರದಿ,ದಾವಣಗೆರೆ:
ಅನಾರೋಗ್ಯದಿಂದ ಬಳಲುತ್ತಿದ್ದ ದಂಪತಿ ಇಳಿ ವಯಸ್ಸಿನಲ್ಲಿ ಆರೈಕೆ ಮಾಡುವವರು ಯಾರೂ ಇಲ್ಲವೆಂದು ಬೇಸತ್ತು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೂಲಿ ಕಾರ್ಮಿಕರಾಗಿದ್ದ ಭಟ್ಟೋಳ್ ಷಣ್ಮುಖಪ್ಪ(65 ವರ್ಷ), ಇಂದ್ರಮ್ಮ(50 ವರ್ಷ) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಷಣ್ಮುಖಪ್ಪ ಮೃತಪಟ್ಟಿದ್ದು, ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂದ್ರಮ್ಮ ಪ್ರಾಣ ಬಿಟ್ಟಿದ್ದಾರೆ.
ಭಟ್ಟೋಳ್ ಷಣ್ಮುಖಪ್ಪ ಇತ್ತೀಚೆಗೆ ಪಾರ್ಶ್ವವಾಯುವಿನಿಂದ ನಿತ್ರಾಣರಾಗಿದ್ದರು. ಪತ್ನಿ ಇಂದ್ರಮ್ಮ ಕೂಡ ಅತಿಯಾದ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು. ಇಳಿ ವಯಸ್ಸಿನಲ್ಲಿ ನಮ್ಮ ಆರೈಕೆ ಮಾಡುವರು ಯಾರೆಂದು ಬೇಸತ್ತು ಇಬ್ಬರೂ ಭಾನುವಾರ ರಾತ್ರಿ ಕ್ರಿಮಿನಾಶಕ ಸೇವಿಸಿದ್ದಾರೆ. ವಿಚಾರ ತಿಳಿದ ಅಕ್ಕಪಕ್ಕದ ಮನೆಯವರು ತಕ್ಷಣವೇ ದಂಪತಿಯನ್ನು ಶಿವಮೊಗ್ಗ ಆಸ್ಪತ್ರೆಗೆ ಸೇರಿಸಲು ತೆರಳಿದ ಮಾರ್ಗಮಧ್ಯೆ ಷಣ್ಮುಖಪ್ಪ ಮೃತಪಟ್ಟಿದ್ದಾರೆ. ಸೋಮವಾರ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದ್ರಮ್ಮ ಸಾವಿಗೀಡಾಗಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.