ಹೊಸದಿಗಂತ ವರದಿ,ಮಳವಳ್ಳಿ :
ಸಾವಿರಾರು ಭಕ್ತರ ನಡುವೆ ಸಿಡಿರಣ್ಣನನ್ನು ಪಟ್ಟಣ್ಣದ ಪ್ರಮುಖ ಬೀದಿಗಳಲ್ಲಿ ಎಳೆದು ಪಟ್ಟಲದಮ್ಮ ದೇವ ಸ್ಥಾನದಲ್ಲಿ ಅಂತಿಮಗೊಳಿಸಿದ ನಂತರ ಪೂಜಾರಿ ಕೊಂಡ ಹಾಯುವುದರ ಮೂಲಕ ಪಟ್ಟಣದಲ್ಲಿ 7 ದಿನಗಳ ಕಾಲ ನಡೆಯುತ್ತಿರುವ ಐತಿಹಾಸಿಕ ಪಟ್ಟಲದಮ್ಮ ಸಿಡಿ ಹಬ್ಬಕ್ಕೆ ತೆರೆ ಬಿದ್ದಿದಂತಾಗಿದೆ.
ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಕೋಟೆ ಪಟೇಲ್ ಚಿಣ್ಣೇಗೌಡರ ಮನೆಯ ಮುಂದೆ ಸಿಡಿ ಯನ್ನು ಕಟ್ಟಲು ಪೂರ್ವ ಸಿದ್ದತೆ ಮಾಡಿ ಕೊಳ್ಳಲಾಗಿತ್ತು, ಗಂಗಾಮತಸ್ಥರ ಬೀದಿಯ ಪಟ್ಟಲದಮ್ಮ ದೇವಸ್ಥಾನದಿಂದ ತಂದಿದ್ದ ಸಿಡಿರಣ್ಣನ ಗೊಂಬೆಯನ್ನು ಸಿಡಿ ಮರಕ್ಕೆ ಕಟ್ಟಲಾಯಿತು. ಮಧ್ಯರಾತ್ರಿ 12 ಗಂಟೆಯ ಸಮಯದಲ್ಲಿ ಸಿಡಿರಣ್ಣನಿಗೆ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು.
ಯುವಕರ ತಂಡ ಸಿಡಿಬಂಡಿಯನ್ನು ಸಾರಂಗಪಾಣಿ ಬೀದಿ, ಕೋಟೆ ಬೀದಿ, ಮೈಸೂರು ರಸ್ತೆ ಮೂಲಕ ಪೇಟೆ ಬೀದಿ ಮೂಲಕ ಸಾಗಿಸಿ ಶನಿವಾರ ಬೆಳಿಗ್ಗೆ 10.30ರಗಂಟೆಗೆ ಗಂಗಾಮತ ಬೀದಿಯ ಕುಪ್ಪಸ್ವಾಮಿ ವೃತ್ತಕ್ಕೆ ಬಂದು ಸುಲ್ತಾನ್ ರಸ್ತೆಯ ಮಾರ್ಗವಾಗಿ ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಬಂದಾಗ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸಿದರು. ಮೂರು ಸುತ್ತು ಸುತ್ತಿದ ಸಿಡಿರಣ್ಣನಿಗೆ ನವ ದಂಪತಿಗಳು ಸೇರಿ ದಂತೆ ಸಾವಿರಾರು ಮಂದಿ ಹಣ್ಣು ಜವನ ಎಸೆದು ಭಕ್ತಿ ಭಾವ ಮೆರೆದರು.
ಶಾಸಕ ಪಿ.ಎಂ ನರೇಂದ್ರಸ್ವಾಮಿ ಪಟ್ಟಲದಮ್ಮನ ಹಾಗೂ ವಳಗೆರೆ ಹುಚ್ಚಮ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಸಿಡಿ ಅಂತಿಮಗೊಳ್ಳುತ್ತಿದ್ದಂತೆ ಗಂಗಾಮತ ಬೀದಿಯ ಅಡ್ಡೆನಿಂಗಯ್ಯನ ಕೇರಿಯ ರಘು ಕೊಂಡಕ್ಕೆ ಪೂಜೆ ಸಲ್ಲಿಸಿ ಕೊಂಡವನ್ನು ಹಾಯ್ದರು, ನಂತರ ಹಕರೆ ಹೊತ್ತ ಸುಮಾರು 50ಕ್ಕೂ ಹೆಚ್ಚು ಮಂದಿ ಸರದಿ ಸಾಲಿನಲ್ಲಿ ತೆರಳಿ ಕೊಂಡ ಹಾಯುವ ಮೂಲಕ ಹರಕೆ ತೀರಿಸಿದರು.
ಹಬ್ಬದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗಿದ್ದ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ಹಾಗೂ ಡಿವೈಎಸ್ಪಿ ವಿ. ಕೃಷ್ಣಪ್ಪ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.
ತಹಶೀಲ್ದಾರ್ ಕೆ.ಎನ್.ಲೋಕೇಶ್ ಸೇರಿದಂತೆ ಇತರೆ ಪ್ರಮುಖರು ಭೇಟಿ ನೀಡಿ ದೇವರ ದರುಶನ ಪಡೆದರು.