ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಸದಬುಟ್ಟಿಯಲ್ಲಿ ಯಾರಿಗೂ ಬೇಡವಾಗಿದ್ದ ಮಗುವನ್ನು ಒಡಿಶಾದ ಮಹಿಳೆಯೊಬ್ಬಳು ತನ್ನ ಮಗುವಿನ ರೀತಿಯಲ್ಲೇ ಆಕೆ ಸಾಕಿದ್ದಳು. ಆದರೆ, 13 ವರ್ಷಗಳ ನಂತರ ಅದೇ ಹುಡುಗಿ ತನ್ನ ಇಬ್ಬರು ಬಾಯ್ಫ್ರೆಂಡ್ಗಳ ಸಹಾಯದಿಂದ ದತ್ತು ತಾಯಿಯನ್ನೇ ಕೊಂದಿರುವ ದಾರುಣ ಘಟನೆ ನಡೆದಿದೆ.
13 ವರ್ಷದ 8 ನೇ ತರಗತಿಯ ವಿದ್ಯಾರ್ಥಿನಿ ತನ್ನ ಇಬ್ಬರು ಪುರುಷ ಸ್ನೇಹಿತರೊಂದಿಗೆ ಸೇರಿ, ಗಜಪತಿ ಜಿಲ್ಲೆಯ ಪರಲಖೆಮುಂಡಿ ಪಟ್ಟಣದಲ್ಲಿರುವ ಬಾಡಿಗೆ ಮನೆಯಲ್ಲಿ ತನ್ನ ದತ್ತು ತಾಯಿ 54 ವರ್ಷದ ರಾಜಲಕ್ಷ್ಮಿ ಕರ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಪೊಲೀಸರ ಪ್ರಕಾರ, ತನ್ನ ಮಗಳು ಇಬ್ಬರು ಯುವಕರೊಂದಿಗಿನ ಸಂಬಂಧಕ್ಕೆ ರಾಜಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದು ಮತ್ತು ಆಕೆಯ ಆಸ್ತಿಯ ಮೇಲೆ ಹಿಡಿತ ಸಾಧಿಸುವ ಬಯಕೆಯೇ ಈ ಕೊಲೆಗೆ ಕಾರಣವಾಗಿತ್ತು ಎನ್ನಲಾಗಿದೆ.
ಅಮ್ಮ ಬುದ್ಧಿ ಹೇಳಿದಾಗ ಕೋಪಗೊಂಡ 13 ವರ್ಷದ ಬಾಲಕಿ ನನಗೆ ಬುದ್ಧಿ ಹೇಳಲು ನೀನೇನು ನನ್ನ ಹೆತ್ತ ತಾಯಿಯೇ? ಎಂದು ಕೇಳಿ ಗಲಾಟೆ ಮಾಡಿದ್ದಳು. ಹೆತ್ತ ಮಗಳಿಗಿಂತ ಹೆಚ್ಚಾಗಿ ಸಾಕಿದ್ದರೂ ಮಗಳು ಈ ರೀತಿ ವರ್ತಿಸಿದ್ದು ರಾಜಲಕ್ಷ್ಮಿಗೆ ಬೇಸರ ತಂದಿತ್ತು. ತನ್ನ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುತ್ತಿದ್ದಾಳೆಂದು ತಾಯಿಯನ್ನು ಕೊಲ್ಲಲು ಯೋಚಿಸಿದ ಆಕೆ ಏಪ್ರಿಲ್ 29ರಂದು ತನ್ನ ಇಬ್ಬರು ಗೆಳೆಯರ ಸಹಾಯದಿಂದ ತನ್ನ ಸಾಕು ತಾಯಿಯನ್ನು ಕೊಂದಿದ್ದಾಳೆ. ಅನಾಥವಾಗಿ ಬಿದ್ದಿದ್ದ ಮಗುವಿಗೆ ಆಸರೆ, ಶಿಕ್ಷಣ, ಸಮಾಜದಲ್ಲಿ ಐಡೆಂಟಿಟಿ ನೀಡಿದ ತಪ್ಪಿಗೆ ರಾಜಲಕ್ಷ್ಮಿ ಅದೇ ಮಗುವಿನಿಂದ ಕೊಲೆಯಾಗಿದ್ದಾರೆ.
ರಾಜಲಕ್ಷ್ಮಿಗೆ ನಿದ್ರೆ ಮಾತ್ರೆಗಳನ್ನು ನೀಡಿ, ನಂತರ ದಿಂಬುಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಮರುದಿನ, ಆಕೆಯ ಮೃತದೇಹವನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಭುವನೇಶ್ವರದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಈ ವೇಳೆ ಸಂಬಂಧಿಕರಿಗೆ ಆಕೆ ಹೃದಯಾಘಾತದಿಂದ ಸಾವು ಕಂಡಿದ್ದಾರೆ ಎಂದು ತಿಳಿಸಲಾಗಿತ್ತು.
ಅಷ್ಟೇ ಆಗಿದ್ದರೆ ಆ ಹುಡುಗಿ ಮಾಡಿದ ಕೊಲೆ ಯಾರಿಗೂ ಗೊತ್ತೇ ಆಗುತ್ತಿರಲಿಲ್ಲ. ಅದೊಂದು ಸಹಜ ಸಾವೆಂದೇ ಎಲ್ಲರೂ ಭಾವಿಸುತ್ತಿದ್ದರು. ಆದರೆ, ರಾಜಲಕ್ಷ್ಮಿಯ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಅವರು ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಹುಡುಗಿಯ ಮೊಬೈಲ್ ಫೋನ್ ಅನ್ನು ಕಂಡುಕೊಳ್ಳುವವರೆಗೂ ಈ ಪ್ರಕರಣವು ಎರಡು ವಾರಗಳ ಕಾಲ ಗೌಪ್ಯವಾಗಿತ್ತು. ಮೊಬೈಲ್ ಪರಿಶೀಲಿಸಿದಾಗ ಕೊಲೆ ಯೋಜನೆಯನ್ನು ವಿವರವಾಗಿ ವಿವರಿಸಿದ ಇನ್ಸ್ಟಾಗ್ರಾಮ್ ಚಾಟ್ಗಳ ಕಂಡು ಬಂದಿವೆ. ಚಾಟ್ಗಳಲ್ಲಿ ರಾಜಲಕ್ಷ್ಮಿಯನ್ನು ಕೊಂದು ಅವಳ ಚಿನ್ನಾಭರಣಗಳು ಮತ್ತು ಹಣವನ್ನು ಪಡೆದುಕೊಳ್ಳುವ ಮಾತುಕತೆಗಳೂ ಆಗಿದ್ದವು.
ಇದು ಗೊತ್ತಾದ ನಂತರ ಮಿಶ್ರಾ ಮೇ 14 ರಂದು ಪರಲಖೆಮುಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು.ಮೂವರು ಆರೋಪಿಗಳಾದ ಹದಿಹರೆಯದ ಹುಡುಗಿ, ದೇವಸ್ಥಾನದ ಅರ್ಚಕ ಗಣೇಶ್ ರಥ್ (21) ಮತ್ತು ಆತನ ಸ್ನೇಹಿತ ದಿನೇಶ್ ಸಾಹು (20) ಬಂಧನವಾಗಿದೆ.