ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಸ್ವಇಚ್ಛೆಯಿಂದ ಭಾರತಕ್ಕೆ ಮರಳುವ ದಿನ ದೂರವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಸಿಐಐ ಬಿಸಿನೆಸ್ ಶೃಂಗಸಭೆಯಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನದ ಬಗ್ಗೆ ಭಾರತದ ನೀತಿ ವಿಧಾನವನ್ನು ವಿವರಿಸಿದರು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಜನರು ಭಾರತದ ಭಾಗವಾಗಿದ್ದು, ಅವರು ಭಾರತದೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕವಾಗಿದ್ದರೂ ಪಿಒಕೆ ಜನರು ಒಂದು ದಿನ ಸ್ವಾಭಿಮಾನ ಮತ್ತು ಸ್ವಇಚ್ಛೆಯೊಂದಿಗೆ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸವಿದೆ. ಅಲ್ಲಿನ ಹೆಚ್ಚಿನ ಜನರು ಭಾರತದೊಂದಿಗೆ ಸಂಪರ್ಕ ಹೊಂದಿದ್ದಾರೆ, ದಾರಿ ತಪ್ಪಿದ ಕೆಲವೇ ಜನರು ಅಲ್ಲಿದ್ದಾರೆ ಎಂದು ಹೇಳಿದರು.
ಭಾರತ ಅವರನ್ನು ನಮ್ಮ ಕುಟುಂಬದ ಭಾಗವೆಂದು ಪರಿಗಣಿಸುತ್ತದೆ.ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರು ನಮ್ಮವರು, ನಮ್ಮ ಕುಟುಂಬದ ಭಾಗ ಎಂದು ನಾನು ನಂಬುತ್ತೇನೆ. ನಮ್ಮಿಂದ ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಬೇರ್ಪಟ್ಟ ನಮ್ಮ ಸಹೋದರರು ಸಹ ಒಂದು ದಿನ ಅವರ ಆತ್ಮದ ಧ್ವನಿಯನ್ನು ಕೇಳುತ್ತಾ ಭಾರತಕ್ಕೆ ಮರಳುತ್ತಾರೆಂಬ ವಿಶ್ವಾಸ ನನಗಿದೆ ಎಂದಿದ್ದಾರೆ.