ಹೊಸದಿಗಂತ ಮಂಡ್ಯ:
ತಾಲ್ಲೂಕಿನ ಹೊನಗಾನಹಳ್ಳಿ ಮಠ ಗ್ರಾಮದಲ್ಲಿ ಆಡವಾಡುತ್ತಿದ್ದಾಗ ವಿಶ್ವೇಶ್ವರಯ್ಯ ನಾಲೆಗೆ ಬಿದ್ದು ಕೊಚ್ಚಿ ಹೋಗಿದ್ದ ಬಾಲಕನ ಶವ ಪತ್ತೆಯಾಗಿದೆ.
ಗ್ರಾಮದ ರಾಜು ಹಾಗೂ ಕಸ್ತೂರಿ ದಂಪತಿಯ ನಾಲ್ಕು ಗಂಡು ಮಗು ಸಬಿನ್‌ರಾಜ್ ಗುರುವಾರ ಮಧ್ಯಾಹ್ನ 2.30ರ ಸಮಯದಲ್ಲಿ ವಿಶ್ವೇಶ್ವರಯ್ಯ ನಾಲೆ ಪಕ್ಕ ಆಟವಾಡುವಾಗ ನಾಲೆಗೆ ಬಿದ್ದಿದ್ದನು. ನೀರು ರಭಸವಾಗಿದ್ದರಿಂದ ಮಗುವಿನ ಮೃತದೇಹ ಪತ್ತೆಯಾಗಿರಲಿಲ್ಲ. ನಂತರ ನೀರನ್ನು ಕಡಿಮೆ ಮಾಡಿಸಿ ಅಗ್ನಿ ಶಾಮಕ ದಳದ ಸಿಬ್ಬಂದಿ ರಾತ್ರಿ 9 ಗಂಟೆಯವರೆಗೂ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ನಾಲೆಯಲ್ಲಿ ಸಂಪೂರ್ಣ ನೀರು ಕಡಿಮೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಮಗುವಿನ ಮೃತದೇಹಕ್ಕಾಗಿ ಹುಡುಕಾಡಿದಾಗ ಮಗು ನಾಲೆಗೆ ಬಿದ್ದ ಸ್ವಲ್ಪ ದೂರದಲ್ಲೇ ಪತ್ತೆಯಾಯಿತು. ನಂತರ ಮಗುವಿನ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ, ಪಂಚನಾಮೆ ನಡೆಸಿದ ಬಳಿಕ ವಾರಸುದಾರರಿಗೆ ನೀಡಲಾಯಿತು.
ನಾಲ್ಕು ವರ್ಷಗ ಮಗನನ್ನು ಕಳೆದುಕೊಂಡ ತಂದೆ-ತಾಯಿ ಹಾಗೂ ಕುಟುಂಬಸ್ಥರ ರೋಧನ ಹೇಳತೀರದಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.