ಹೊಸದಿಗಂತ ವರದಿ, ಬಾಗಲಕೋಟೆ:
ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ. ಅದನ್ನು ಬಿಟ್ಟು ಕೇಂದ್ರ ಸರ್ಕಾರ ಸಾಲ ಮಾಡಿದೆ ಎಂದು ಹೇಳುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿರುವ ಹಣಕ್ಕಿಂತ ಹೆಚ್ಚಿನ ಸಾಲವನ್ನು ರಾಜ್ಯದ ಜನರ ಮೇಲೆ ಹೊರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ೨೦೧೮ರಲ್ಲಿ ಬಾದಾಮಿಯಲ್ಲಿ ಸ್ವಲ್ಪ ಮತಗಳ ಅಂತರದಿಂದ ಗೆದ್ದಿದ್ದೀರಿ. ಆ ವೇಳೆ ಬಾದಾಮಿಯನ್ನು ದತ್ತು ಪಡೆಯುತ್ತೇನೆ ಎಂದು ಹೇಳಿದ್ದು ನೆನಪಿದೆ. ಎಷ್ಟರ ಮಟ್ಟಿಗೆ ಆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ೨೦೧೮ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನಡೆಸಬೇಕಾಯಿತು .ಕಾಂಗ್ರೆಸ್ ಒತ್ತಡದಿಂದಲೇ ಆ ಸರ್ಕಾರ ನಡೆಯಿತು. ನಂತರ ಸರಕಾರ ಬಿತ್ತು. ಈಗ ಮೂರು ವರ್ಷದಿಂದ ನೀವೇ ಸಿಎಂ ಆಗಿದ್ದೀರಿ. ಬಾದಾಮಿ ಕ್ಷೇತ್ರದ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಯಾಕೆ ಸಾಧ್ಯವಾಗಿಲ್ಲ ಜನರಿಗೆ ತಿಳಿಸಿ ಎಂದರು.
೨೦೧೪ರಲ್ಲಿ ಕಾಂಗ್ರೆಸ್ನವರು ರೈತರ ಸಾಲಮನ್ನಾ ಮಾಡಿದರು. ಅದು ೨೦೧೮ರ ಸಮ್ಮಿಶ್ರ ಸರಕಾರದ ತಲೆ ಮೇಲೆ ಬಿತ್ತು. ನೀವು ಲಘುವಾಗಿ ವಿಪಕ್ಷಗಳ ಮಾತುಗಳಿಗೆ ಪ್ರತಿಕ್ರಿಯೆ ಕೊಡ್ತಿರಿ. ನಾವು ನಿಮ್ಮಷ್ಟು ಬುದ್ದಿವಂತರಲ್ಲ ಕೇಂದ್ರ ಸರ್ಕಾರವನ್ನು ಪ್ರತಿನಿತ್ಯ ಟೀಕೆ ಮಾಡ್ತೀರಿ ತಲಾ ಆದಾಯದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿ ಇದೆ ಎಂದು ಹೇಳುತ್ತೀರಿ. ಪ್ರತಿ ಕುಟುಂಬದ ತಲಾ ಆದಾಯ ಹೆಚ್ಚಾಗಿದೆ ಎಂದು ಹೇಳುತ್ತಿರಿ ಹಾಗಿದ್ದರೆ ಈ ಗ್ಯಾರಂಟಿ ಯೋಜನೆಗಳ ಅವಶ್ಯಕತೆ ಏನಿದೆ? ನಿಮ್ಮಲ್ಲಿಯೇ ದ್ವಂದ್ವ ನಿಲುವುಗಳಿವೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಹಣಮಂತ ಮಾವಿನಮರದ, ಬಂಡೆಪ್ಪ ಕಾಶಾಂಪುರ, ಭೋಸರಾಜು, ಅಲ್ಕೋಡ ಹಣಮಂತ ಪತ್ರಿಕಾಗೋಷ್ಠಿಯಲ್ಲಿದ್ದರು.



