ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತುಹಾಕಲಾಗಿದೆ ಎಂಬ ಪ್ರಕರಣ ಕ್ಷಣ ಕ್ಷಣಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ‘ಮಾಸ್ಕ್ ಮ್ಯಾನ್’ ದೂರುದಾರನನ್ನು ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಹತ್ತು ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿದೆ.
ಮುಂದಿನ ಹತ್ತು ದಿನಗಳ ಕಾಲ ಎಸ್ಐಟಿ ನಡೆಸಲಿರುವ ವಿಚಾರಣೆಯಲ್ಲಿ ಇನ್ನಷ್ಟು ಮಹತ್ವದ ಅಂಶಗಳು ಬೆಳಕಿಗೆ ಬರುವ ಸಾಧ್ಯತೆ ಇದೆ. ಇಷ್ಟು ದಿನ ಸಾಕ್ಷಿ ದೂರುದಾರನಾಗಿದ್ದ ‘ಮಾಸ್ಕ್ ಮ್ಯಾನ್’ನನ್ನು ಎಸ್ಐಟಿ ಸುಳ್ಳು ದೂರಿನ ಆರೋಪದಲ್ಲಿ ಇಂದು ಬಂಧಿಸಿದೆ. ಅದಾದ ಬಳಿಕ ಸತತ ವಿಚಾರಣೆ ನಡೆಸಿದ್ದ ಅಧಿಕಾರಿಗಳು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿ ಧರ್ಮಸ್ಥಳ ದೇವಸ್ಥಾನದ ವಿರುದ್ಧ ನಡೆಸಿದ ಷಡ್ಯಂತ್ರದಲ್ಲಿ ಈತ ಭಾಗಿಯಾಗಿರುವ ಬಗ್ಗೆ ಹೆಚ್ಚಿನ ತನಿಖೆಗಾಗಿ ತಮ್ಮ ಕಸ್ಟಡಿಗೆ ಕೇಳಿದ್ದರು. ಎಸ್ಐಟಿ ವಾದದಲ್ಲಿ ಹುರುಳಿದೆ ಎಂಬುದನ್ನು ಮನಗಂಡ ನ್ಯಾಯಾಲಯ ಆತನನ್ನು ೧೦ ದಿನಗಳ ಕಾಲ ಎಸ್ಐಟಿ ಕಸ್ಟಡಿಗೆ ನೀಡಿ ಆದೇಶ ನೀಡಿದೆ.