ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಗೆ ಬಿಟ್ಟುಕೊಡಲಾಯಿತು ಎಂಬ ಬಗ್ಗೆ ಬಿಜೆಪಿ ಆರೋಪ ದೇಶಾದ್ಯಂತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಈ ಬೆಳವಣಿಗೆ ಬಗ್ಗೆ ಶ್ರೀಲಂಕಾ ಪ್ರತಿಕ್ರಿಯೆ ನೀಡಿದ್ದು, ಕಚ್ಚತೀವು ದ್ವೀಪದ ವಿಷಯವನ್ನು ಈ ವರೆಗೂ ಯಾರೂ ಪ್ರಸ್ತಾಪಿಸಿರಲಿಲ್ಲ.ಆದ್ದರಿಂದ ಲಂಕಾ ಕ್ಯಾಬಿನೆಟ್ ನಲ್ಲಿ ಆ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಹೇಳಿದೆ.
1974 ರಲ್ಲಿ ಕಚ್ಚತೀವು ಎಂಬ ಸಣ್ಣ ದ್ವೀಪವನ್ನು ಕಾಂಗ್ರೆಸ್ ಪಕ್ಷ ಕೊಲಂಬೋಗೆ ಬಿಟ್ಟುಕೊಟ್ಟಿತ್ತು ಎಂದು ಬಿಜೆಪಿ ಆರೋಪಿಸಿತ್ತು.
ಇತ್ತ ಸಂಪುಟವು ಅದನ್ನು ಎಂದಿಗೂ ಪ್ರಸ್ತಾಪಿಸದ ಕಾರಣ ಅದನ್ನು ಚರ್ಚಿಸಲಿಲ್ಲ ಎಂದು ಶ್ರೀಲಂಕಾ ಸಂಪುಟದ ವಕ್ತಾರ ಮತ್ತು ವಾರ್ತಾ ಸಚಿವ ಬಂಡುಲ ಗುಣವರ್ಧನ ಅವರು ತಿಳಿಸಿದರು.
ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಕಾಂಗ್ರೆಸ್ ಪಕ್ಷವು ಬಿಟ್ಟುಕೊಟ್ಟಿದೆ ಎಂದು ಹೊಸ ಸಂಗತಿಗಳು ಬಹಿರಂಗಪಡಿಸುತ್ತವೆ ಎಂಬುದನ್ನು ಪ್ರತಿಪಾದಿಸಲು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಾಧ್ಯಮ ವರದಿಯನ್ನು ಉಲ್ಲೇಖಿಸಿದ್ದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕಚ್ಚತೀವು ದ್ವೀಪದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ವಿರುದ್ಧ ವಾಗ್ದಾಳಿ ನಡೆಸಿದ್ದರು.