ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ಮಧ್ಯಾಹ್ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ವಿಮಾನದಲ್ಲಿ 12 ಸಿಬ್ಬಂದಿ ಸೇರಿದಂತೆ ಒಟ್ಟು 242 ಜನರಿದ್ದರು.
ಈ ಸಾವಿನ ವಿಮಾನದಲ್ಲಿ ಡಾ. ಕೋನಿ ವ್ಯಾಸ್ ಅವರ ಕುಟುಂಬವು ಹೊಸ ಜೀವನದ ಕನಸು ಕಾಣುತ್ತಿತ್ತು. ರಾಜಸ್ಥಾನದ ಬನ್ಸ್ವಾರಾದ ಖಾಸಗಿ ಆಸ್ಪತ್ರೆಯಲ್ಲಿ ರೋಗಶಾಸ್ತ್ರಜ್ಞರಾಗಿದ್ದ ಡಾ. ಕೋನಿ, ಲಂಡನ್ ಮೂಲದ ವೈದ್ಯರಾಗಿರುವ ತಮ್ಮ ಪತಿ ಪ್ರತೀಕ್ ಜೋಶಿ ಮತ್ತು ಅವರ ಮೂವರು ಮಕ್ಕಳ ಜೊತೆ ಪಯಣ ಬೆಳೆಸಿದ್ದರು.
ಐದು ವರ್ಷದ ಅವಳಿ ಗಂಡು ಮಕ್ಕಳಾದ ಪ್ರದ್ಯುತ್ ಮತ್ತು ನಕುಲ್ ಮತ್ತು ಎಂಟು ವರ್ಷದ ಮಗಳು ಮಿರಾಯಾ ಅವರೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಕಳೆದ ತಿಂಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.
ವಿಮಾನ ಹಾರುವ ಮೊದಲು, ಕುಟುಂಬವು ಸೆಲ್ಫಿ ಕ್ಲಿಕ್ಕಿಸಿಕೊಂಡಿತು. ವಿಮಾನದ ಒಂದು ಬದಿಯಲ್ಲಿ ಪೋಷಕರು ಮತ್ತು ಇನ್ನೊಂದು ಬದಿಯಲ್ಲಿ ಮಕ್ಕಳು ಕೂತಿದ್ದರು ಅದಾದ ಕೆಲವೇ ನಿಮಿಷಗಳ ನಂತರ, ದುರಂತ ಸಂಭವಿಸಿತು.
ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ಹೊಸ ಜೀವನಕ್ಕಾಗಿ ಎದುರು ನೋಡುತ್ತಿದ್ದ ಕುಟುಂಬ ನುಚ್ಚುನೂರಾಗಿದೆ. ಹೊಸ ಜೀವನ ಆರಂಭಿಸಬೇಕು ಎಂದುಕೊಂಡಿದ್ದ ಅವರ ಕನಸು ಮಣ್ಣಾಗಿದೆ.