ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಬಸ್, ಆಟೋ,ರೈಲಿನಲ್ಲಿ ಜನರು ತಮ್ಮ ವಸ್ತು ಮರೆತು ಬರುತ್ತಾರೆ. ಕೆಲವು ಸಂದರ್ಭ ಮರಳಿ ಸಿಕ್ಕರೆ, ಕೆಲವೊಮ್ಮೆ ಸಿಗದೇ ಇರುವುದು ಇದೆ. ಅದೇ ರೀತಿಯ ಒಂದು ಘಟನೆ ವಂದೇ ಭಾರತ್ ರೈಲು ಪ್ರಯಾಣದ ವೇಳೆ ನಡೆದಿದೆ.
ಹೌದು, ವೈದ್ಯರು ಒಬ್ಬರು ವಂದೇ ಭಾರತ್ ರೈಲು ಮೂಲಕ ಚೆನ್ನೈ ಸಮೀಪದ ಎಗಮೋರ್‌ಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಯಾಣದ ನಡುವೆ ವಾಶ್‌ರೂಂಗೆ ತೆರಳಿದ ವೈದ್ಯರು ತಮ್ಮ ವಾಚ್ ಬಿಚ್ಚಿಟ್ಟು ಮರೆತಿದ್ದಾರೆ.
ಇದಾದ ಬಳಿಕ ವೈದ್ಯರು ರೈಲು ಇಳಿದು ಮನೆ ಸೇರಿದ ಬಳಿಕ ತಾವು ವಾಚ್ ಮರೆತಿರುವುದು ಗೊತ್ತಾಗಿದೆ. ತಕ್ಷಣವೇ ರೇಲ್ವೇ ವೆಬ್‌ಸೈಟ್ ಮೂಲಕ ದೂರು ದಾಖಲಿಸಿದ್ದಾರೆ. ಹೀಗೆ ದೂರು ದಾಖಲಿಸಿದ 40 ನಿಮಿಷಕ್ಕೆ ವೈದ್ಯರ ವಾಚ್ ಪತ್ತೆಯಾದ ರೋಚಕ ಘಟನೆಯನ್ನು ವೈದ್ಯರು ವಿವರಿಸಿದ್ದಾರೆ.
ವೈದ್ಯರು ರಾತ್ರಿ 11 ಗಂಡೆಗೆ ಎಗಮೋರ್ ರೈಲು ನಿಲ್ದಾಣ ತಲುಪಿದ್ದಾರೆ. ರೈಲು ಇಳಿದು ಮನೆ ಸೇರಿದಾಗ ತಾವು ಪ್ರಯಾಣ ಮಾಡುತ್ತಿರುವಾಗ ವಾಶ್‌ರೂಂಗೆ ಹೋದ ಸಂದರ್ಭದಲ್ಲಿ ವಾಚ್ ಅಲ್ಲೆ ಬಿಟ್ಟಿರುವುದು ನೆನಪಿಗೆ ಬಂದಿದೆ. ಈ ವೇಳೆ ಮಧ್ಯ ರಾತ್ರಿ 12.28ರ ಹೊತ್ತಿಗೆ ಭಾರತೀಯ ರೈಲ್ವೇ ವೆಬ್‌ಸೈಟ್‌ನಲ್ಲಿ ತಮ್ಮ ರೈಲು ಪಿಎನ್ಆರ್ ಸಂಖ್ಯೆ, ಆಧಾರ್ ಸಂಖ್ಯೆ ಸೇರಿದಂತೆ ಇತರ ದಾಖಲೆ ನಮೂದಿಸಿ ದೂರು ದಾಖಲಿಸಿದ್ದಾರೆ. ದೂರು ಖಚಿತಪಡಿಸಿದ ಬಳಿಕ ವಾಚ್ ಕಳೆದುಕೊಂಡ ನೋವಿನಲ್ಲಿ ಯೋಚಿಸುತ್ತಾ ಕುಳಿತಿದ್ದಾರೆ. 12.49ರ ವೇಳೆಗೆ ರೈಲ್ವೇ ಇಲಾಖೆಯ ಆರ್‌ಪಿಎಫ್‌ನಿಂದ ಕರೆಯೊಂದು ಬಂದಿದೆ. ನೀವು ಪ್ರಯಾಣಿಸಿದ ವಂದೇ ಭಾರತ್ ರೈಲು ಯಾರ್ಡ್‌ಗೆ ತೆರಳಿದ.ಪರಿಶೀಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಮಧ್ಯರಾತ್ರಿ 1.21ಕ್ಕೆ ವ್ಯಾಟ್ಸಾಪ್ ಮೂಲಕ ವಾಚ್ ಫೋಟೋ ಬಂದಿದೆ. ಬಳಿಕ ಆರ್‌ಪಿಎಫ್ ಅಧಿಕಾರಿ ಕರೆ ಮಾಡಿ ವಾಚ್ ಪತ್ತೆಯಾಗಿದೆ. ಖಚಿತಪಡಿಸಿ ನಿಮ್ಮ ವಾಚ್ ಪಡೆದುಕೊಳ್ಳಿ ಎಂದು ಸೂಚಿಸಿದ್ದಾರೆ. ದೂರು ದಾಖಲಿಸಿ ವಾಚ್ ಪತ್ತೆಯಾದ ಸಮಯ, ಕರೆ ಎಲ್ಲವೂ ಸೇರಿ ಒಟ್ಟು 40 ನಿಮಿಷ ತೆಗೆದುಕೊಂಡಿದ್ದಾರೆ. 40 ನಿಮಿಷದಲ್ಲಿ ಕಳೆದುಹೋದ ವಾಚ್ ಪತ್ತೆಯಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಮರು ದಿನ ಸ್ಟೇಶನ್‌ಗೆ ತರಳಿ ದಾಖಲೆ ನೀಡಿ ವಾಚ್ ಪಡೆದುಕೊಂಡಿದ್ದಾರೆ. ವಾಚ್‌ಗಾಗಿ ಶ್ರಮಿಸಿದ ರೈಲ್ವೇ ಇಲಾಖೆಯ ಎಲ್ಲಾ ಸಿಬ್ಬಂಧಿಗಳಿಗೆ ದೊಡ್ಡ ಸಲ್ಯೂಟ್. ಇದರ ನೀತಿ ಪಾಠ ಎಂದರೆ ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ, ಸರ್ಕಾರದ ಮೇಲೆ ವಿಶ್ವಾಸವಿಡಿ ಎಂದು ವೈದ್ಯರು ಹೇಳಿದ್ದಾರೆ.