ಹೊಸದಿಗಂತ ವರದಿ, ಮಡಿಕೇರಿ:
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಂತಿದ್ದ ಕಾರೊಂದರಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತರನ್ನುಮಂಡ್ಯ ಜಿಲ್ಲೆ ಪಾಂಡವಪುರ ಬಳಿಯ ಶಿವಳ್ಳಿ ಗ್ರಾಮದ ಸತೀಶ್ (47) ಎಂದು ಗುರುತಿಸಲಾಗಿದ್ದು, ಇವರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೊಣಸೂರು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರೆಂದು ಹೇಳಲಾಗಿದೆ.
ಕುಶಾಲನಗರ ಸಮೀಪದ ಆನೆಕಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗಂಟೆಗಳಿಂದ ನಿಂತಿದ್ದ ಕಾರನ್ನು ಪರಿಶೀಲಿಸಿದಾಗ, ಚಾಲಕನ ಆಸನದಲ್ಲಿ ಸತೀಶ್ ಅವರು ಹೆಣವಾಗಿರುವುದು ಪತ್ತೆಯಾಗಿದೆ.
ವಿಷಯ ತಿಳಿದ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು,ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಇದು ಹೃದಯಾಘಾತದಿಂದ ಉಂಟಾದ ಸಾವೆಂದು ಹೇಳಲಾಗುತ್ತಿದೆಯಾದರೂ, ನಿಖರ ಕಾರಣಕ್ಕಾಗಿ ಪೊಲೀಸರು ಎದುರು ನೋಡುತ್ತಿದ್ದಾರೆ.