ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನೆಲ್ಲೆಡೆ ಇಂದು ಶ್ರದ್ಧಾ ಭಕ್ತಿಗಳ ಸಂಗಮವಾದ ‘ವೈಕುಂಠ ಏಕಾದಶಿ’ಯ ಸಡಗರ ಮನೆಮಾಡಿದೆ. ಮುಂಜಾನೆಯಿಂದಲೇ ವಿಷ್ಣು ದೇವಾಲಯಗಳಲ್ಲಿ ಭಕ್ತರು ಗೋವಿಂದ ನಾಮ ಸ್ಮರಣೆ ಮಾಡುತ್ತಾ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಟಿಟಿಡಿ ದೇವಾಲಯವು ಭಕ್ತರ ದಂಡನ್ನೇ ಸ್ವಾಗತಿಸಲು ಸಜ್ಜಾಗಿದೆ. ಮಧ್ಯರಾತ್ರಿ 1:30 ರಿಂದಲೇ ದರ್ಶನ ಆರಂಭವಾಗಿದ್ದು, ಸತತವಾಗಿ ನಾಳೆ ರಾತ್ರಿ 11 ಗಂಟೆಯವರೆಗೆ ಮುಂದುವರಿಯಲಿದೆ.
ಸುಮಾರು 80 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ನೂಕುನುಗ್ಗಲು ತಡೆಯಲು ಸುಸಜ್ಜಿತ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ.
ರಾಜಾಜಿನಗರದ ಇಸ್ಕಾನ್ ದೇವಾಲಯದಲ್ಲಿ ವೈಕುಂಠ ದ್ವಾರ ಪ್ರವೇಶಿಸಲು ಭಕ್ತರು ಮುಂಜಾನೆಯಿಂದಲೇ ಕಿಲೋಮೀಟರ್‌ಗಟ್ಟಲೆ ಉದ್ದದ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ನೆಲಮಂಗಲದ 800 ವರ್ಷಗಳ ಇತಿಹಾಸವಿರುವ ಪ್ರಸಿದ್ಧ ಶ್ರೀದೇವಿ ಭೂದೇವಿ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ವೈಶಿಷ್ಟ್ಯಪೂರ್ಣ ಪೂಜೆಗಳು ನಡೆಯುತ್ತಿವೆ. ಈ ಪುರಾತನ ದೇವಾಲಯದ ‘ಉತ್ತರ ದ್ವಾರ’ದ ಮೂಲಕ ವೈಕುಂಠನ ದರ್ಶನ ಪಡೆಯಲು ಸುಮಾರು 25 ಸಾವಿರಕ್ಕೂ ಅಧಿಕ ಭಕ್ತರು ಆಗಮಿಸುವ ಸಾಧ್ಯತೆಯಿದೆ.
ವರ್ಷದ 24 ಏಕಾದಶಿಗಳ ಪೈಕಿ ವೈಕುಂಠ ಏಕಾದಶಿಗೆ ಅಗ್ರಸ್ಥಾನವಿದೆ. ವೈದಿಕ ನಂಬಿಕೆಯಂತೆ ಈ ದಿನ ವೈಕುಂಠದ ದ್ವಾರಗಳು ತೆರೆದಿರುತ್ತವೆ. ಭಕ್ತರು ಉಪವಾಸ ಮತ್ತು ಜಾಗರಣೆ ಮಾಡುವ ಮೂಲಕ ಶ್ರೀಹರಿಯ ಪ್ರಾರ್ಥನೆ ಸಲ್ಲಿಸಿದರೆ, ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ಅಚಲ ವಿಶ್ವಾಸ ಭಕ್ತರಲ್ಲಿದೆ.

