March 15, 2026
Sunday, March 15, 2026
spot_img

ಸಿನಿಮಾ ಶಕ್ತಿಗಿಂತ ಚುನಾವಣಾ ನೀತಿ ಸಂಹಿತೆಯೇ ಬಲವಾಯಿತು: ‘ಜನ ನಾಯಗನ್’ ಬಿಡುಗಡೆಗೆ ಬ್ರೇಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ ಬಿಡುಗಡೆಯ ಹಾದಿ ಮತ್ತೆ ಕಗ್ಗಂಟಾಗಿದೆ. ಇಂದು ತಮಿಳುನಾಡು ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿ, ರಾಜ್ಯಾದ್ಯಂತ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದು ಚಿತ್ರದ ಬಿಡುಗಡೆಗೆ ಅತಿ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.

ಜನವರಿ 9 ರಂದೇ ತೆರೆಗೆ ಬರಬೇಕಿದ್ದ ಈ ಚಿತ್ರಕ್ಕೆ ಪ್ರಮಾಣ ಪತ್ರ ನೀಡಲು ಸಿಬಿಎಫ್‌ಸಿ ವಿಳಂಬ ಮಾಡಿತು. ನಿರ್ಮಾಣ ಸಂಸ್ಥೆ ಕೆವಿಎನ್ ನ್ಯಾಯಾಲಯದ ಮೊರೆ ಹೋದರೂ ವಿಚಾರಣೆ ವಿಳಂಬವಾಯಿತು. ನಂತರ ಕೇಸು ಹಿಂಪಡೆದರೂ ಸಣ್ಣಪುಟ್ಟ ಕಾರಣಗಳಿಗಾಗಿ ಸೆನ್ಸಾರ್ ಪ್ರಕ್ರಿಯೆಯನ್ನು ಎಳೆದಾಡಲಾಯಿತು.

ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರೀಮೇಕ್ ಎನ್ನಲಾಗಿದ್ದರೂ, ಈ ಚಿತ್ರದಲ್ಲಿ ರಾಜಕೀಯ ಪಕ್ಷಗಳ ವಿರುದ್ಧ ನೇರ ಟೀಕೆ ಹಾಗೂ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಂ’ ಪಕ್ಷದ ಪರವಾದ ಸಂಭಾಷಣೆಗಳಿವೆ ಎನ್ನಲಾಗಿದೆ. ಇದು ಸೆನ್ಸಾರ್ ಮಂಡಳಿಯ ಆಕ್ಷೇಪಕ್ಕೆ ಕಾರಣವಾಗಿತ್ತು.

ಇದೀಗ ಚುನಾವಣೆ ಘೋಷಣೆಯಾಗಿರುವುದರಿಂದ, ಮತದಾರರ ಮೇಲೆ ಪ್ರಭಾವ ಬೀರಬಹುದಾದ ಅಥವಾ ರಾಜಕೀಯ ಪ್ರಚಾರದಂತಿರುವ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶವಿಲ್ಲ. ಹೀಗಾಗಿ, ಸಿಬಿಎಫ್‌ಸಿ ಪ್ರಮಾಣ ಪತ್ರ ನೀಡಿದರೂ ಸಿನಿಮಾ ಬಿಡುಗಡೆ ಮಾಡುವುದು ಅಸಾಧ್ಯವಾಗಿದೆ.

ತಮಿಳುನಾಡು ವಿಧಾನಸಭೆ ಚುನಾವಣೆ ಏಪ್ರಿಲ್ 23, 2026 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ. ಸ್ವತಃ ವಿಜಯ್ ಅವರೇ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವುದರಿಂದ ಅವರ ರಾಜಕೀಯ ವಿರೋಧಿಗಳು ಸಿನಿಮಾ ಬಿಡುಗಡೆಯಾಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

‘ಜನ ನಾಯಗನ್’ ಸಿನಿಮಾ ಈಗ ನೇರವಾಗಿ ಫಲಿತಾಂಶದ ನಂತರ, ಅಂದರೆ ಮೇ ತಿಂಗಳಲ್ಲಿ ಮಾತ್ರ ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದು ವಿಜಯ್ ಅವರ ರಾಜಕೀಯ ಜೀವನದ ಮೊದಲ ದೊಡ್ಡ ಪರೀಕ್ಷೆಯಾಗಿದ್ದು, ಸಿನಿಮಾ ಬಿಡುಗಡೆ ತಡೆಹಿಡಿದಿರುವುದು ಅವರಿಗೆ ರಾಜಕೀಯವಾಗಿ ಹಿನ್ನಡೆಯಾಗುತ್ತದೆಯೇ ಅಥವಾ ಅಭಿಮಾನಿಗಳ ಅನುಕಂಪ ಗಿಟ್ಟಿಸಿಕೊಡುತ್ತದೆಯೇ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !