ಹೊಸದಿಗಂತ ಡಿಜಿಟಲ್ ಡೆಸ್ಕ್:
ಬದುಕಿನ ʻಯಾನʼ ಮುಗಿಸಿದ `ಅಕ್ಷರ ಮಾಂತ್ರಿಕ’ ಎಸ್.ಎಲ್ ಭೈರಪ್ಪ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೂ ಮುನ್ನ ಭೈರಪ್ಪ ಅವರಿಗೆ ರಾಜ್ಯ ಸರ್ಕಾರ ಸಕಲ ಸರ್ಕಾರಿ ಗೌರವ ನೀಡಿತು. ಅಂತಿಮ ವಿಧಿ ವಿಧಾನವನ್ನು ತಮ್ಮ ಪುತ್ರರು ಮಾಡಬಾರದು ಎಂದು ಭೈರಪ್ಪ ಅವರು ಬರೆದಿಟ್ಟಿದ್ದರು. ಹೀಗಾಗಿ ಅಂತಿಮ ವಿಧಿ ವಿಧಾನ ಯಾರು ನೆರವೇರಿಸುತ್ತಾರೆ ಎಂಬ ಪ್ರಶ್ನೆ ಇತ್ತು. ಆದರೆ ಅಂತಿಮ ಪೂಜೆಯಲ್ಲಿ ಭೈರಪ್ಪ ಅವರ ಇಬ್ಬರು ಪುತ್ರರು ಭಾಗಿಯಾಗಿದ್ದರು. ಪುತ್ರರಾದ ಉದಯ್ ಶಂಕರ್, ರವಿಶಂಕರ್ ಪೂಜೆಯಲ್ಲಿ ಕುಳಿತು ಅಂತಿಮ ಕಾರ್ಯ ನೆರವೇರಿಸಿದರು. ಹಿರಿಯ ಪುತ್ರ ರವಿಶಂಕರ್ ಅವರು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಅಂತ್ಯಕ್ರಿಯೆ ವೇಳೆ ಭೈರಪ್ಪರ ಹುಟ್ಟೂರಿನ ಜನ, ಕುಟುಂಬಸ್ಥರು ಭಾಗಿಯಾಗಿದ್ದರು. ಸಚಿವರಾದ ಹೆಚ್.ಸಿ.ಮಹದೇವಪ್ಪ, ವೆಂಕಟೇಶ್, ಎಂಎಲ್‌ಸಿ ಶಿವಕುಮಾರ್, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರ ಗಣ್ಯರು ಉಪಸ್ಥಿತರಿದ್ದರು.