ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಈಗ ಐಷಾರಾಮಿ ಸೌಲಭ್ಯಗಳ ತಾಣ ಎಂಬ ಕುಖ್ಯಾತಿಯನ್ನು ಪಡೆದಿದೆ. ಜೈಲಿನೊಳಗಿನ ಕೈದಿಗಳ ‘ಹೈಫೈ ಜೀವನ’ದ ವಿಡಿಯೋಗಳು ಮತ್ತು ಫೋಟೋಗಳು ದಿನೇ ದಿನೇ ಹೊರಬರುತ್ತಿದ್ದು, ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿವೆ. ಕೈದಿಗಳು ಮೊಬೈಲ್ ಬಳಸುತ್ತಿರುವುದು, ಮದ್ಯ ತಯಾರಿಸುತ್ತಿರುವ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಜೈಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಕರ್ಮಕಾಂಡವನ್ನು ತಡೆಯಲು ದಿಟ್ಟ ನಿರ್ಧಾರ ತೆಗೆದುಕೊಂಡಿರುವ ಸರ್ಕಾರ, ಜೈಲಿನ ಮೂವರು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಮತ್ತು ಐಪಿಎಸ್ ಅಧಿಕಾರಿ ಅಂಶುಕುಮಾರ್ ಅವರನ್ನು ಹೊಸ ಮುಖ್ಯ ಅಧೀಕ್ಷಕರಾಗಿ ನೇಮಕ ಮಾಡಿದೆ.
ನೂತನ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಂಡ ಕೂಡಲೇ ಜೈಲಿನಲ್ಲಿ ದಿಢೀರ್ ಪರಿಶೀಲನೆ ನಡೆಸಿದರು. ಗುರುವಾರ ರಾತ್ರಿ ಎರಡು ಹಂತಗಳಲ್ಲಿ (8:30 ರಿಂದ 9:30 ಮತ್ತು 11:05 ರಿಂದ 12:30) ನಡೆದ ಈ ತಪಾಸಣೆ ವೇಳೆ ಜೈಲಿನ ಕೆಲ ಬ್ಯಾರಕ್‌ಗಳಲ್ಲಿ ಭಾರೀ ಅಕ್ರಮ ವಸ್ತುಗಳು ಪತ್ತೆಯಾಗಿವೆ.
ವಶಪಡಿಸಿಕೊಂಡ ವಸ್ತುಗಳ ಪಟ್ಟಿ ಇಂತಿದೆ:
33 ಮೊಬೈಲ್ ಫೋನ್‌ಗಳು
22 ಸಿಮ್ ಕಾರ್ಡ್‌ಗಳು
5 ಚಾರ್ಜರ್‌ಗಳು
4 ಇಯರ್ ಬಡ್ಸ್‌ಗಳು
49,000 ನಗದು
1 ಇಯರ್ ಫೋನ್
3 ಚಾಕು ತರಹದ ವಸ್ತುಗಳು
ಈ ಹಿಂದಷ್ಟೇ ಜೈಲಿನೊಳಗೆ ಮೊಬೈಲ್ ಬಳಸುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಅದರಲ್ಲಿ, 2021 ರಿಂದ ಬಂಧಿಯಾಗಿರುವ ಐಸಿಸ್ ಸಂಘಟನೆಯ ಉಗ್ರ ಜುಹಾಬ್ ಶಕೀಲ್ ಮನ್ನಾ, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ ಹಾಗೂ ಚಿನ್ನ ಕಳ್ಳಸಾಗಾಣಿಕೆ ಆರೋಪಿ ತರುಣ್ ರಾಜ್ ಪ್ರಮುಖರಾಗಿದ್ದರು.
ಇಂತಹ ಸೂಕ್ಷ್ಮ ಕೈದಿಗಳ ಬಳಿ ಮೊಬೈಲ್ ಮತ್ತು ನಗದು ಹೇಗೆ ಬಂತು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ವಸ್ತುಗಳನ್ನು ಜೈಲಿಗೆ ತಂದು ಕೊಟ್ಟವರು ಯಾರು? ಕೈದಿಗಳಿಗೆ ಬಳಸಲು ಅವಕಾಶ ಮಾಡಿಕೊಟ್ಟವರು ಯಾರು? ಎಂಬ ಬಗ್ಗೆ ತನಿಖೆ ಆರಂಭವಾಗಿದೆ. ಕರ್ತವ್ಯ ಲೋಪ ಎಸಗಿದವರ ಮೇಲೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಹೊಸ ಸೂಪರಿಂಟೆಂಡೆಂಟ್ ಅಂಶುಕುಮಾರ್ ಅವರ ಈ ದಿಟ್ಟ ಕ್ರಮವು ಜೈಲಿನ ವ್ಯವಸ್ಥೆಯನ್ನು ಸುಧಾರಿಸುವ ಭರವಸೆ ಮೂಡಿಸಿದೆ.

