April 12, 2026
Sunday, April 12, 2026
spot_img

ರೈತನ ಮಗನಿಗೆ ರೈತರನ್ನೇ ನೋಡುವ ವ್ಯವಧಾನವಿಲ್ಲ: ಸಿಎಂ ವಿರುದ್ಧ ಅನ್ನದಾತರ ಆಕ್ರೋಶ

ಹೊಸದಿಗಂತ ಬೀದರ್:

ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಕಾದು ಕುಳಿತಿದ್ದ ಅನ್ನದಾತರಿಗೆ ಶನಿವಾರ ನಿರಾಸೆ ಮತ್ತು ಆಕ್ರೋಶ ಎರಡೂ ಎದುರಾಗಿದೆ. ನಗರದಲ್ಲಿ ಆಯೋಜನೆಯಾಗಿದ್ದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ಭೇಟಿಯ ಅವಕಾಶ ನೀಡದೆ ತೆರಳಿದ್ದು, ಜಿಲ್ಲೆಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ಐದು ದಶಕಗಳಿಂದ ವೈಜ್ಞಾನಿಕ ಪರಿಹಾರಕ್ಕಾಗಿ ಹೋರಾಡುತ್ತಿರುವ ಕಾರಂಜಾ ಯೋಜನೆ ಸಂತ್ರಸ್ತರು, 29 ಹಳ್ಳಿಗಳ ಸುಮಾರು 50 ಸಾವಿರಕ್ಕೂ ಅಧಿಕ ರೈತ ಕುಟುಂಬಗಳ ಸಹಿ ಸಂಗ್ರಹದ ಪ್ರತಿಯೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಸಜ್ಜಾಗಿದ್ದರು. ಆದರೆ, ವಿಮಾನ ನಿಲ್ದಾಣದಿಂದ ಕಾರ್ಯಕ್ರಮದ ವೇದಿಕೆಯವರೆಗೂ ಪೊಲೀಸರು ರೈತರನ್ನು ತಡೆದಿದ್ದರಿಂದ ಸಿಎಂಗೆ ಮನವಿ ಸಲ್ಲಿಸುವ ಪ್ರಯತ್ನ ವಿಫಲವಾಯಿತು.

ರೈತ ಮುಖಂಡ ವಿ.ಕೆ. ದೇಶಪಾಂಡೆ ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಿಎಂ ಸಿದ್ದರಾಮಯ್ಯ ಅವರ ವರ್ತನೆಯನ್ನು ‘ಬೇಜವಾಬ್ದಾರಿ’ ಎಂದು ಕರೆದರು. “ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಚುನಾವಣೆಗೂ ಮುನ್ನ ಪ್ಯಾಕೇಜ್ ಘೋಷಿಸುವುದಾಗಿ ನೀಡಿದ್ದ ವಾಗ್ದಾನ ಎಲ್ಲಿ ಹೋಯಿತು? ರಾಜ್ಯದ ಪಾಲಿನ ಗೋದಾವರಿ ಜಲಾನಯನದ 24 ಟಿಎಂಸಿ ನೀರು ತೆಲಂಗಾಣ ಪಾಲಾಗುತ್ತಿದ್ದರೂ ಅದರ ಬಗ್ಗೆ ಮಾತನಾಡದ ಇವರು ‘ನುಡಿದಂತೆ ನಡೆಯುವವರು’ ಹೇಗೆ?” ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮತ್ತು ಸಚಿವ ರಹೀಂ ಖಾನ್ ವಿರುದ್ಧವೂ ಕಿಡಿಕಾರಿದ ಅವರು, “ದಿವಂಗತ ಭೀಮಣ್ಣ ಖಂಡ್ರೆ ಅವರು ರೈತರ ಏಳಿಗೆಗಾಗಿ ಶ್ರಮಿಸಿದ್ದರು. ಆದರೆ ಅವರ ಮಗ ಈಶ್ವರ ಖಂಡ್ರೆ ತಂದೆಯ ತತ್ವಾದರ್ಶಗಳನ್ನು ಮರೆತು ಜಿಲ್ಲೆಯ ಸಮಸ್ಯೆಗಳ ಕುರಿತು ವೇದಿಕೆಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ನೈತಿಕ ಹೊಣೆ ಹೊತ್ತು ಇಬ್ಬರೂ ಸಚಿವರು ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.

ಜಿಲ್ಲೆಯ ಒಟ್ಟು 1.60 ಲಕ್ಷ ರೈತರ ಸಹಿ ಸಂಗ್ರಹಿಸಿರುವ ಹೋರಾಟಗಾರರು, 2028ರ ಚುನಾವಣೆಯ ಒಳಗೆ ಕಾರಂಜಾ ಸಂತ್ರಸ್ತರಿಗೆ ಪರಿಹಾರ ಮತ್ತು ಬಿಎಸ್ಎಸ್ಕೆ ಕಾರ್ಖಾನೆಗೆ ಪ್ಯಾಕೇಜ್ ನೀಡದಿದ್ದರೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.

ಈ ಪ್ರತಿಭಟನೆಯ ಸಂದರ್ಭದಲ್ಲಿ ರೈತ ಮುಖಂಡರಾದ ಚಂದ್ರಶೇಖರ ಪಾಟೀಲ, ಸೋಮನಾಥ ಪಾಟೀಲ, ಬಳವಂತರಾವ ಸೇರಿದಂತೆ ಅನೇಕ ರೈತ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !