ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗಳ ಸಂಸಾರದಲ್ಲಿ ವಿಷ ತುಂಬಿದ್ದ ಅಳಿಯನ ಅಟ್ಟಹಾಸಕ್ಕೆ ಮಾವನೇ ಅಂತ್ಯ ಹಾಡಿರುವ ಭೀಕರ ಘಟನೆ ಶಿವಮೊಗ್ಗದ ವಿನೋಬನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ನಡೆದಿದೆ. ಮಗಳ ಜೀವನ ಹಾಳು ಮಾಡುತ್ತಿದ್ದಾನೆ ಎಂಬ ಸಿಟ್ಟಿನಲ್ಲಿ ಮಾವ ಮತ್ತು ಆತನ ಸಂಬಂಧಿಕರು ಸೇರಿ ಅರುಣ್ ಎಂಬ ಯುವಕನನ್ನು ರಾಡ್‌ನಿಂದ ಹೊಡೆದು ಬಲಿ ಪಡೆದಿದ್ದಾರೆ.
ವಿನೋಬನಗರದ ಶ್ರೀನಿಧಿ ವೈನ್ ಶಾಪ್ ಮುಂದೆ ಅರುಣ್ ನಿಂತಿದ್ದಾಗ, ಅಚಾನಕ್ಕಾಗಿ ದಾಳಿ ನಡೆಸಿದ ಇಬ್ಬರು ವ್ಯಕ್ತಿಗಳು ತಲೆಗೆ ಕಬ್ಬಿಣದ ರಾಡ್‌ನಿಂದ ಬಲವಾಗಿ ಹೊಡೆದಿದ್ದಾರೆ. ಹೊಡೆತದ ತೀವ್ರತೆಗೆ ಅರುಣ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ವಿಶೇಷವೆಂದರೆ, ಈ ಭೀಕರ ಕೊಲೆಯ ಜಾಗದಲ್ಲಿ ರಕ್ತದ ಕಲೆಗಳಾಗಲಿ ಅಥವಾ ಇತರ ಯಾವುದೇ ಸಾಕ್ಷ್ಯಗಳಾಗಲಿ ಪತ್ತೆಯಾಗದಂತೆ ಆರೋಪಿಗಳು ಸಂಚು ರೂಪಿಸಿದ್ದರು.
ಮೃತ ಅರುಣ್ ಹಾಗೂ ಯಶಸ್ವಿನಿ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಂದು ಮಗುವೂ ಇದೆ. ಕೂಲಿ ಕೆಲಸ ಮಾಡುತ್ತಿದ್ದ ಅರುಣ್‌ಗೆ ಗಾಂಜಾ ಮತ್ತು ಕುಡಿತದ ವ್ಯಸನವಿತ್ತು ಎನ್ನಲಾಗಿದೆ. ಅಮಲಿನಲ್ಲಿ ಮನೆಗೆ ಬಂದು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಈ ದೌರ್ಜನ್ಯ ತಾಳಲಾರದೆ ಯಶಸ್ವಿನಿ ಕಳೆದ ಮೂರು ತಿಂಗಳಿನಿಂದ ತವರು ಮನೆಯಲ್ಲಿದ್ದರು.
ಪತ್ನಿ ತವರು ಮನೆಗೆ ಹೋದ ಮೇಲೂ ಅರುಣ್ ಸುಮ್ಮನಿರಲಿಲ್ಲ. “ನಿಮ್ಮ ಇಡೀ ಕುಟುಂಬವನ್ನೇ ಟಾರ್ಗೆಟ್ ಮಾಡುತ್ತೇನೆ” ಎಂದು ಪತ್ನಿ ಮತ್ತು ಮಾವನಿಗೆ ಬೆದರಿಕೆ ಹಾಕುತ್ತಿದ್ದ ಎಂದು ತಿಳಿದುಬಂದಿದೆ. ಇದರಿಂದ ಆಕ್ರೋಶಗೊಂಡ ಯಶಸ್ವಿನಿಯ ತಂದೆ ತಿಪ್ಪೇಶ್ ಮತ್ತು ಆಕೆಯ ಸೋದರಮಾವ ಲೋಕೇಶ್, ಅರುಣ್‌ನನ್ನು ಮುಗಿಸಲು ನಿರ್ಧರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ. ಮಗಳ ಬದುಕನ್ನು ಉಳಿಸಲು ಹೋಗಿ ಮಾವ ಈಗ ಜೈಲು ಪಾಲಾಗುವಂತಾಗಿದೆ.

