ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಅತಿ ಭದ್ರತೆಯ ಪರಪ್ಪನ ಅಗ್ರಹಾರ ಜೈಲು ಮತ್ತೆ ಸುದ್ದಿಯಾಗಿದೆ. ಈ ಬಾರಿ ಚರ್ಚೆಗೆ ಕಾರಣವಾದದ್ದು, ಕೈದಿಗೆ 20 ಸಾವಿರ ರೂಪಾಯಿಗೆ ಮೊಬೈಲ್ ಫೋನ್ ಮಾರಾಟ ಮಾಡಲು ಯತ್ನಿಸಿದ ಜೈಲು ಸಿಬ್ಬಂದಿಯೇ ಸಿಕ್ಕಿಬಿದ್ದಿರುವ ಘಟನೆ.
ಮೂಲಗಳ ಪ್ರಕಾರ, ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀಕ್ಷಕನಾಗಿ (ವಾರ್ಡನ್) ಕರ್ತವ್ಯ ನಿರ್ವಹಿಸುತ್ತಿದ್ದ ಅಮರ್ ಪ್ರಾಂಜೆ (29) ಎಂಬ ಸಿಬ್ಬಂದಿ ಕೈದಿಗಳಿಗೆ ಮೊಬೈಲ್ ಸರಬರಾಜು ಮಾಡುತ್ತಿದ್ದಾನೆಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಅಕ್ಟೋಬರ್ 23ರಂದು ಕರ್ತವ್ಯಕ್ಕೆ ಬಂದಿದ್ದ ಅಮರ್ ಪ್ರವೇಶದ್ವಾರದಲ್ಲಿ ಕೆಎಸ್‌ಐಎಸ್‌ಎಫ್ (KSISF) ಸಿಬ್ಬಂದಿಯ ತಪಾಸಣೆಗೆ ಒಳಪಡಿಸಲು ನಿರಾಕರಿಸಿದ್ದಾನೆ. ತಪಾಸಣೆಗೆ ಸಮ್ಮತಿಸದೆ ಹಿಂತಿರುಗಲು ಯತ್ನಿಸಿದಾಗ ಅನುಮಾನಗೊಂಡ ಸಿಬ್ಬಂದಿ ಬಲವಂತವಾಗಿ ಶೋಧ ನಡೆಸಿದರು.
ಈ ವೇಳೆ ಅಮರ್‌ನ ಒಳಉಡುಪಿನಿಂದ ಒಂದು ಸ್ಮಾರ್ಟ್‌ಫೋನ್ ಹಾಗೂ ಇಯರ್‌ಫೋನ್ ಪತ್ತೆಯಾಯಿತು. ತಕ್ಷಣ ಘಟನೆಯ ಕುರಿತು ಜೈಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಬಳಿಕ ಅಮರ್ ಪ್ರಾಂಜೆಯನ್ನ ಬಂಧಿಸಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಒಪ್ಪಿಸಲಾಯಿತು. ಜೈಲು ಅಧೀಕ್ಷಕ ಹೆಚ್.ಎ. ಪರಮೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.
ವಿಚಾರಣೆ ವೇಳೆ ಅಮರ್ ಬಾಯ್ಬಿಟ್ಟಿದ್ದು ಆಘಾತಕಾರಿ ಮಾಹಿತಿ. ಜೈಲಿನಲ್ಲಿರುವ ಕೊಲೆ ಆರೋಪಿಯೊಬ್ಬರಿಂದ 20 ಸಾವಿರ ರೂ. ಪಡೆದು, ಅದರ ಬದಲಿಗೆ ಮೊಬೈಲ್ ಒಳಗೆ ತಲುಪಿಸಲು ಯತ್ನಿಸಿದ್ದೇನೆ ಎಂದು ಹೇಳಿಕೊಂಡಿದ್ದಾನೆ. 10 ಸಾವಿರ ರೂಪಾಯಿ ಮುಂಗಡ ಹಣ ಈಗಾಗಲೇ ಸ್ವೀಕರಿಸಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಈ ಘಟನೆಯ ಹಿನ್ನೆಲೆಯಲ್ಲಿ ಕೈದಿಗೆ ಹಣ ನೀಡಿ ಮೊಬೈಲ್ ಖರೀದಿಸಲು ಯತ್ನಿಸಿದ ಕೈದಿಯನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಅಮರ್ ಪ್ರಾಂಜೆ 2019ರಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವೀಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

