January15, 2026
Thursday, January 15, 2026
spot_img

ಅಂತರ್ಧರ್ಮೀಯ ವಿವಾಹದ ಸುಖ ಸಂಸಾರಕ್ಕೆ ‘ಅನುಮಾನ’ದ ಅಗ್ನಿಸ್ಪರ್ಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾತಿ-ಧರ್ಮದ ಎಲ್ಲೆಗಳನ್ನು ಮೀರಿ, ಪೋಷಕರ ವಿರೋಧದ ನಡುವೆಯೂ ಪ್ರೀತಿಸಿ ಕೈ ಹಿಡಿದಿದ್ದ ಪತಿಯೊಬ್ಬ ತನ್ನ ಪತ್ನಿಯನ್ನೇ ಸಂಶಯದಿಂದ ಕೊಲೆಗೈದ ಭೀಕರ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ತಾಲೂಕಿನ ಗೆರಿಗೆರೆಡ್ಡಿಪಾಳ್ಯದಲ್ಲಿ ನಡೆದಿದೆ.

ನಾಲ್ಕು ವರ್ಷಗಳ ಹಿಂದೆ ಚಾಲಕನಾಗಿದ್ದ ಬಾಲು ಎಂಬಾತ ಅದೇ ಗ್ರಾಮದ ಅನ್ಯಕೋಮಿನ ದಿಲ್ಷಾತ್ ಅವರನ್ನು ಪ್ರೀತಿಸಿದ್ದ. ಕುಟುಂಬದವರ ವಿರೋಧದ ನಡುವೆಯೂ ದಂಪತಿ ಅಂತರ್ ಧರ್ಮೀಯ ವಿವಾಹವಾಗಿದ್ದರು. ದಿಲ್ಷಾತ್ ಅವರು ಮದುವೆಯ ನಂತರ ತಮ್ಮ ಹೆಸರನ್ನು ಕವಿತಾ ಎಂದು ಬದಲಾಯಿಸಿಕೊಂಡಿದ್ದರು. ಈ ದಂಪತಿಗೆ ಎರಡು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. “ನಾ ನಿನಗೆ, ನೀ ಎನಗೆ” ಎನ್ನುವಂತೆ ಆರಂಭದಲ್ಲಿ ಸುಖ ಸಂಸಾರ ಸಾಗಿಸಿದ್ದ ಈ ಜೋಡಿಯ ಬದುಕಿಗೆ, ಇತ್ತೀಚೆಗೆ ಪತಿ ಬಾಲು ಅವರಲ್ಲಿ ಹುಟ್ಟಿದ ಅನುಮಾನದ ಕಾಯಿಲೆ ಗ್ರಹಣ ಹಿಡಿಯಿತು.

ಕಳೆದ ಕೆಲವು ದಿನಗಳಿಂದ ಬಾಲು ತನ್ನ ಪತ್ನಿ ಮೇಲೆ ತೀವ್ರ ಸಂಶಯ ವ್ಯಕ್ತಪಡಿಸುತ್ತಿದ್ದ. ಆಕೆ ಬೇರೆಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾಳೆ ಮತ್ತು ಫೋನ್‌ಗಳಲ್ಲಿ ಮಾತನಾಡುತ್ತಾಳೆ ಎಂದು ಪದೇ ಪದೇ ಜಗಳ ಮಾಡುತ್ತಿದ್ದ.

ಘಟನೆ ನಡೆದ ದಿನ, ಕೆಲಸ ಮುಗಿಸಿ ಮನೆಗೆ ಬಂದಿದ್ದ ಕವಿತಾ ಅವರೊಂದಿಗೆ ಬಾಲು ಮತ್ತೆ ಇದೇ ವಿಷಯಕ್ಕೆ ಜಗಳ ತೆಗೆದಿದ್ದಾನೆ. ಜಗಳ ತಾರಕಕ್ಕೇರಿ ಕೋಪದ ಭರದಲ್ಲಿ ಮನೆಯಲ್ಲಿದ್ದ ಕಬ್ಬಿಣದ ರಾಡ್‌ನಿಂದ ಪತ್ನಿಯ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಕವಿತಾ ಕುಸಿದು ಬಿದ್ದಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ ಪತ್ನಿಯನ್ನು ಬಾಲು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಪ್ರೀತಿಯ ಕೈ ಹಿಡಿದು ಸಂಸಾರ ಮಾಡಿದ್ದವಳು ಈಗ ಶವವಾಗಿ ಮನೆ ಸೇರಿದ್ದರೆ, ಕೊಲೆ ಆರೋಪದ ಮೇಲೆ ಬಾಲು ಅವರನ್ನು ಚೇಳೂರು ಪೊಲೀಸರು ಬಂಧಿಸಿದ್ದಾರೆ. ಪ್ರೀತಿಸಿ ಮದುವೆಯಾದ ಪತಿ ಮಾಡಿದ ತಪ್ಪಿಗೆ, ಎರಡು ಪುಟ್ಟ ಹೆಣ್ಣು ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ. ತಾಯಿ ಸಾವಿನ ಮನೆ ಸೇರಿದರೆ, ತಂದೆ ಪೊಲೀಸರ ಅತಿಥಿಯಾಗಿ ಜೈಲುಪಾಲಾಗಿದ್ದಾರೆ. ಪ್ರಪಂಚದ ಅರಿವಿಲ್ಲದ ಕಂದಮ್ಮಗಳ ದುಃಸ್ಥಿತಿ ನಿಜಕ್ಕೂ ದುರಂತವೇ ಸರಿ.

ಚೇಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

Most Read

error: Content is protected !!