Sunday, December 28, 2025

ಸಪ್ತಸಾಗರದಾಚೆ ಮೊಳಗಿದ ಕನ್ನಡದ ಕಂಪು: ದುಬೈ ಕನ್ನಡಿಗರ ಭಾಷಾ ಪ್ರೇಮಕ್ಕೆ ಮೋದಿ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೆಕ್ ಲೋಕದ ಭರಾಟೆಯಲ್ಲಿ ತಮ್ಮ ಮುಂದಿನ ಪೀಳಿಗೆ ಮಾತೃಭಾಷೆಯಿಂದ ದೂರವಾಗಬಾರದು ಎಂಬ ದುಬೈ ಕನ್ನಡಿಗರ ಹಂಬಲ ಇದೀಗ ದೇಶದ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 129ನೇ ‘ಮನ್ ಕೀ ಬಾತ್’ ರೇಡಿಯೋ ಭಾಷಣದಲ್ಲಿ ಅನಿವಾಸಿ ಕನ್ನಡಿಗರ ಈ ಮಹತ್ಕಾರ್ಯವನ್ನು ವಿಶೇಷವಾಗಿ ಪ್ರಸ್ತಾಪಿಸಿ ಶ್ಲಾಘಿಸಿದ್ದಾರೆ.

ದುಬೈನಲ್ಲಿ ನೆಲೆಸಿರುವ ಸಾವಿರಾರು ಕನ್ನಡಿಗರು ತಮ್ಮ ಮಕ್ಕಳು ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಬೆಳೆಯುತ್ತಿರುವಾಗ, ತಮ್ಮ ಮೂಲ ಸಂಸ್ಕೃತಿ ಮತ್ತು ಕನ್ನಡ ಭಾಷೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಆತಂಕಕ್ಕೆ ಒಳಗಾಗಿದ್ದರು. ಈ ಆತಂಕವೇ ಒಂದು ಸುಂದರ ಅಭಿಯಾನಕ್ಕೆ ನಾಂದಿ ಹಾಡಿತು.

ತಮ್ಮ ಮಕ್ಕಳಿಗೆ ಕನ್ನಡ ಕಲಿಸಲೇಬೇಕು ಎಂಬ ದೃಢ ಸಂಕಲ್ಪ ಮಾಡಿದ ಅಲ್ಲಿನ ಕನ್ನಡಿಗರು, ದುಬೈನಲ್ಲಿಯೇ ‘ಕನ್ನಡ ಪಾಠಶಾಲೆ’ಯನ್ನು ಆರಂಭಿಸಿದರು. ಈ ಮೂಲಕ ವಿದೇಶಿ ಮಣ್ಣಿನಲ್ಲೂ ಕನ್ನಡದ ದೀಪವನ್ನು ಹಚ್ಚಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಪ್ರಧಾನಿ, “ದುಬೈ ಕನ್ನಡಿಗರು ತಮ್ಮ ಮಕ್ಕಳು ಕನ್ನಡದಿಂದ ದೂರವಾಗುತ್ತಿದ್ದಾರೆ ಎಂದು ಅರಿತ ತಕ್ಷಣವೇ ಎಚ್ಚೆತ್ತುಕೊಂಡು ಪಾಠಶಾಲೆ ಆರಂಭಿಸಿದ್ದು ನಿಜಕ್ಕೂ ಮಾದರಿ” ಎಂದು ಗುಣಗಾನ ಮಾಡಿದರು.

ಪ್ರಧಾನಿಯವರು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಕುರಿತಾದ ವಿಡಿಯೋವನ್ನು ಹಂಚಿಕೊಂಡಿದ್ದು, ಕನ್ನಡಿಗರ ಭಾಷಾಭಿಮಾನಕ್ಕೆ ರಾಷ್ಟ್ರಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.

error: Content is protected !!