Wednesday, October 22, 2025

ʼದೀಪಾವಳಿ ಕೊಡುಗೆ ಹೆಸರಿನಲ್ಲಿ ಸರ್ಕಾರವೇ ಜನರ ಜೇಬಿಕೆ ಕೈ ಹಾಕಿದೆʼ

ಹೊಸದಿಗಂತ ವರದಿ ಮಂಡ್ಯ:

ದೀಪಾವಳಿ ಕೊಡುಗೆ ಕೊಡುತ್ತಿದ್ದೇವೆ ಎಂದು ಹೇಳಿ ರಾಜ್ಯ ಸರ್ಕಾರ ಬೆಂಗಳೂರು ಜನರ ಕಿಸೆಗೆ ಕೈ ಹಾಕಿದೆ. ಎ ಖಾತಾ ಸೋಗಿನಲ್ಲಿ 15,000 ಕೋಟಿ ಸುಲಿಗೆ ಮಾಡುತ್ತಿದೆ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.

ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ಹೊಸದಾಗಿ ನಿರ್ಮಿಸಿರುವ ಸುಸಜ್ಜಿತ ಆಟೋ ನಿಲ್ದಾಣವನ್ನು ಉದ್ಘಾಟಿಸಿದ ಬಳಿಕ ರೈತ ಭವನದ ಬಳಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.

ದೀಪಾವಳಿ ಕೊಡುಗೆ ಎಂದರೆ ಏನೋ ನಮಗೆ ದೊಡ್ಡ ಕೊಡುಗೆಯನ್ನು ಕೊಡುತ್ತದೆ ಎಂದು ಜನರು ಭಾವಿಸಿದ್ದರು. ದೊಡ್ಡ ದೊಡ್ಡ ಜಾಹೀರಾತುಗಳನ್ನು ನೋಡಿ ನಾನು ಕೂಡ ಹಾಗೆಯೇ ಅಂದುಕೊಂಡಿದ್ದೆ. ಆದರೆ, ಅದು ದೀಪಾವಳಿ ಹೆಸರಿನಲ್ಲಿ ಜನರಿಗೆ ಮಾಡುತ್ತಿರುವ ಮಹಾನ್ ದೋಖಾ ಇದಾಗಿದೆ ಎಂದು ಕೇಂದ್ರ ಸಚಿವರು ಕಿಡಿಕಾರಿದರು.

ಬೆಂಗಳೂರು ನಗರ ಜನರಿಗೆ ದೀಪಾವಳಿ ಕೊಡುಗೆ ನೀಡಲು ಶಾಕ್ ಕೊಡ್ತಿದ್ದಾರೆ. ಅದು ಹೇಗಿದೆ ಎಂದರೆ, ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಮಾಡುವ ಅರ್ಜಿಗೆ 500 ರೂಪಾಯಿ ಶುಲ್ಕ ತುಂಬಬೇಕು. ಆ ಶುಲ್ಕದ ಹೆಸರಿನಲ್ಲಿಯೇ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡುತ್ತಿದೆ ಈ ಸರ್ಕಾರ.

30/40 ನಿವೇಶನಕ್ಕೆ 4ರಿಂದ 8 ಲಕ್ಷ ರೂಪಾಯಿವರೆಗೂ ಕಿತ್ತುಕೊಳ್ಳುತ್ತಿದ್ದಾರೆ. ಮೊದಲು 10ರಿಂದ 13 ಸಾವಿರ ರೂಪಾಯಿ ಅಷ್ಟನ್ನೇ ಕಟ್ಟಬೇಕಿದ್ದ ಬೆಂಗಳೂರು ಜನರು ಇನ್ನು ಮುಂದೆ ಲಕ್ಷಗಳಲ್ಲಿ ಹಣ ಏರಬೇಕಿದೆ. ಎ ಖಾತಾ ದಂಧೆಯ ಮೂಲಕ ರಾಜ್ಯ ಸರ್ಕಾರ 15,000 ಕೋಟಿ ರೂಪಾಯಿ ವಸೂಲಿ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಆರೋಪ ಮಾಡಿದರು.

error: Content is protected !!