Monday, November 24, 2025

ರಾಜ್ಯದಲ್ಲಿ ಅನಧಿಕೃತ ಮೆಡಿಕಲ್ ಸ್ಫಾಗಳ ಮೇಲೆ ಕಠಿಣ ಕ್ರಮಕ್ಕೆ ಮುಂದಾದ ಸರಕಾರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿನ ಅನಧಿಕೃತ ಮೆಡಿಕಲ್ ಸ್ಫಾಗಳ ಮೇಲೆ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಅನಧಿಕೃತವಾಗಿ ನಡೆಸುತ್ತಿದ್ದು, ಸಿಕ್ಕಿ ಬಿದ್ದರೇ ಕಾನೂನು ಕ್ರಮದಡಿ ಶಿಕ್ಷೆ ಫಿಕ್ಸ್ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅವರು, ನಾಡಿನ ಜನರ ಆರೋಗ್ಯ ಕಾಳಜಿಯನ್ನು ಕಡೆಗಣಿಸಿ ಕೇವಲ ವ್ಯಾಪಾರ ದೃಷ್ಟಿಯಿಂದ ಅನಧಿಕೃತವಾಗಿ ತಲೆಎತ್ತಿದ್ದ ಮೆಡಿಕಲ್ ಸ್ಫಾಗಳ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಲವಾರು ಗಂಭೀರ ದೂರುಗಳು ಬಂದಿದ್ದಲ್ಲದೆ, ಮಾಧ್ಯಮಗಳಲ್ಲೂ ವರದಿ ಬಂದಿದ್ದವು ಎಂದಿದ್ದಾರೆ.

ಪರಿಣಿತರಲ್ಲದಿದ್ದರೂ ಕೆಮಿಕಲ್ಸ್ ಬಳಸಿ ಸೌಂದರ್ಯವರ್ಧಕ ಚಿಕಿತ್ಸೆ ಮಾಡುವ, ವೃದ್ಧರ ಮೂಳೆ- ಕೀಳು ಸಮಸ್ಯೆಗಳನ್ನೇ ಬಂಡವಾಳ ಮಾಡಿಕೊಂಡು ಶಾಶ್ವತ ಪರಿಹಾರ ಸಿಗಲಿದೆ ಎಂದು ನಂಬಿಸಿ ರೇಡಿಯೇಷನ್ ಥೆರಫಿ ಮಾಡುತ್ತಿದ್ದ ಜಾಲಗಳನ್ನು ಪತ್ತೆಹಚ್ಚಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿತ್ತು, ಅದಾಗ್ಯೂ, ಹೆಚ್ಚಿನ ಕಣ್ಗಾವಲಿರಿಸುವುದು ಅಗತ್ಯಗತ್ಯ ಎಂಬುದನ್ನು ಮನಗಂಡು ಈ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯಿದೆ, 2007 (KPME Act, 2007) ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿ ಈಗಾಗಲೇ ಜಾರಿ ಮಾಡಿದ್ದು, ಸೌಂದರ್ಯವರ್ಧಕ ಚಿಕಿತ್ಸೆಗಳು ಮತ್ತು ಸಂಬಂಧಿತ ಸೇವೆಗಳನ್ನು ನೀಡುವ ಮೆಡಿಕಲ್ ಸ್ಪಾಗಳನ್ನು (Medical Spa) ಅಧಿಕೃತವಾಗಿ ‘ವೈದ್ಯಕೀಯ ಸಂಸ್ಥೆಗಳು’ ಎಂದು ಘೋಷಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿಯಂತ್ರಣಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಬೊಟಿಕ್ಸ್, ಲೇಸರ್ ಚಿಕಿತ್ಸೆಗಳು, ಲಿಪೊಸೆಕ್ಷನ್, ಕೂದಲು ಕಸಿ, IV ಹೈಡ್ರೇಷನ್ ಥೆರಪಿ ಹಾಗೂ ಶರಿರಕ್ಕೆ ಸಂಬಂಧಿಸಿದಂತೆ ಇತರೆ ಸೌಂದರ್ಯವರ್ಧಕ (ಕಾಸ್ಮೆಟಿಕ್) ಚಿಕಿತ್ಸೆಯ ಗುಣಮಟ್ಟದ ಮೇಲೆ ಕಣ್ಗಾವಲಿಡಲು ಈ ನಿಯಮ ತರಲಾಗಿದೆ.

ಈ ಆದೇಶವು ಅನಧಿಕೃತವಾಗಿ ವೈದ್ಯಕೀಯ ಅಭ್ಯಾಸ ಮಾಡುವ ಮತ್ತು ವೃತ್ತಿಪರರಲ್ಲದವರು ನಡೆಸುತ್ತಿರುವ ಕಾಸ್ಮೆಟಿಕ್ ಸ್ಕಿನ್ ಕ್ಲಿನಿಕ್‌ಗಳು, ಕೊರಿಯನ್ ಚರ್ಮದ ಆರೈಕೆ ಕೇಂದ್ರಗಳು, ಮಸಾಜ್ ಸೆಂಟರ್‌ಗಳು ಮತ್ತು ಸ್ಪಾಗಳನ್ನು ನಿಯಂತ್ರಿಸಲು ಅಗತ್ಯವಾಗಿದೆ.

ಇದರಿಂದ ವೈದ್ಯಕೀಯ ಕ್ಷೇತ್ರದ ವಂಚಕರ (Quacks) ಹಾವಳಿಗೆ ಕಡಿವಾಣ ಬೀಳಲಿದೆ. ಅದಕ್ಕಾಗಿ ಸಂಬಂಧಿತ ಆರೋಗ್ಯ ವೃತ್ತಿಪರರ (Allied Health Professionals) ಸೇವೆಗಳನ್ನೂ ಸಹ ಈ ಅಧಿಸೂಚನೆಯ ನಿಯಂತ್ರಣದ ವ್ಯಾಪ್ತಿಗೆ ತರಲಾಗುತ್ತಿದೆ.

ಪ್ರಮುಖವಾಗಿ:

  • ಶ್ರವಣಶಾಸ್ತ್ರಜ್ಞರು (Audiology)
  • ಸ್ಪೀಚ್ ಥೆರಪಿ (ಮಾತಿನ ಚಿಕಿತ್ಸೆ)
  • ಆಹಾರ ತಜ್ಞರು (Dieticians)
  • ದೈಹಿಕ ಮನೋವಿಜ್ಞಾನ / ಕ್ಲಿನಿಕಲ್ ಮನೋವಿಜ್ಞಾನ
  • ಮೂಳೆ, ಕೀಲು ಹಾಗೂ ಸ್ನಾಯು ಚಿಕಿತ್ಸೆ
  • ಪಾದ ಚಿಕಿತ್ಸೆ
  • ವಿಕಿರಣ ಚಿಕಿತ್ಸೆ ಅಥವಾ ಎಕ್ಸ್-ರೇ
  • ಕ್ಷ-ಕಿರಣ ಮತ್ತು ವೈದ್ಯಕೀಯ ಇಮೇಜಿಂಗ್
  • ಉಸಿರಾಟದ ಚಿಕಿತ್ಸೆ
  • ಸೋನೋಗ್ರಫಿ
  • ದಂತ ಮತ್ತು ಆಕ್ಯುಪೇಷನಲ್ ಥೆರಪಿ
  • ಇತರೆ ಅಲೈಡ್ ಹೆಲ್ತ್ ವ್ಯವಸ್ಥೆಗಳು

(ಉದಾಹರಣೆಗೆ: ಫಿಸಿಯೋಥೆರಪಿಸ್ಟ್, ಆಕ್ಯುಪೇಷನಲ್ ಥೆರಪಿಸ್ಟ್, ಇತ್ಯಾದಿ)

ಅಲೋಪಥಿ ಅಥವಾ ಆಯುರ್ವೇದದಂತಹ ವೈದ್ಯಕೀಯ ಪದವಿ ಪಡೆದ ವೈದ್ಯರು ತಮ್ಮ ಕ್ಷೇತ್ರಕ್ಕೆ ಸಂಬಂಧವಿಲ್ಲದ ಕಾಸ್ಮೆಟಿಕ್ ಕ್ಲಿನಿಕ್‌ಗಳನ್ನು ಅನಧಿಕೃತವಾಗಿ ನಡೆಸುವುದನ್ನು ನಿಯಂತ್ರಿಸಲು ಈ ಮಹತ್ವದ ಆದೇಶ ಹೊರಡಿಸಿದ್ದು, ಈ ಕ್ರಮವು ರಾಜ್ಯದಲ್ಲಿ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ಪಾರದರ್ಶಕತೆ ತರುವಲ್ಲಿ ಸಹಕಾರಿಯಾಗಲಿದೆ.

ಸರ್ಕಾರ ಮತ್ತು ಆರೋಗ್ಯ ಇಲಾಖೆ, ಈ ಮೇಲಿನ ಅವೈಜ್ಞಾನಿಕ, ಅನಧಿಕೃತ ಸ್ಫಾಗಳ ಮೇಲೆ ಕಣ್ಗಾವಲ್ಲಿಟ್ಟಿದ್ದು, ಈ ಆದೇಶದ ಹೊರತಾಗಿಯೂ ದೂರುಗಳು ಕೇಳಿ ಬಂದರೆ ಅಂತವರನ್ನು ಗಂಭೀರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ.

https://x.com/dineshgrao?ref_src=twsrc%5Egoogle%7Ctwcamp%5Eserp%7Ctwgr%5Eauthor

ನಿಮ್ಮೆಲ್ಲರ ಆರೋಗ್ಯ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ. ನೀವುಗಳು ಸಹ ಈ ಅನಧಿಕೃತ ಸೌಂದರ್ಯವರ್ಧಕ ಅಥವಾ ಥೆರಪಿ ಚಿಕಿತ್ಸಾ ಕೇಂದ್ರಗಳ ಬಗ್ಗೆ ಎಚ್ಚರದಿಂದಿರಿ, ನಿಮ್ಮ ನೆರೆಹೊರೆಯವರಲ್ಲೂ ಜಾಗೃತಿ ಮೂಡಿಸಿ. ಅನುಮಾನಾಸ್ಪದ ಚಿಕಿತ್ಸೆಗಳ ಬಗ್ಗೆ ದೂರುಗಳಿದ್ದರೆ ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಕ್ಕೆ ತನ್ನಿ. ಜಾಗೃತರಾಗಿ, ಆರೋಗ್ಯ ಕರ್ನಾಟಕ ನಿರ್ಮಾಣಕ್ಕೆ ಕೈ ಜೋಡಿಸಿ ಎಂಬುದಾಗಿ ಕರೆ ನೀಡಿದ್ದಾರೆ.

error: Content is protected !!