ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ವರ್ಗಾವಣೆ ದಂಧೆಯಲ್ಲಿ ಸಂಪೂರ್ಣವಾಗಿ ಮುಳುಗಿದೆ. ಜನರ ಸಂಕಷ್ಟದ ಬಗ್ಗೆ ಮುಖ್ಯಮಂತ್ರಿಗಳಿಗೆ ಕಿಂಚಿತ್ತೂ ಗಮನವಿಲ್ಲ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯಿಂದ ಹಲವೆಡೆ ಮನೆಗಳ ಹಾನಿ, ಜಾನುವಾರುಗಳ ಸಾವು ದೊಡ್ಡ ಪ್ರಮಾಣದಲ್ಲಿ ಆಗಿದೆ.11 ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಅತ್ತ ಉಳಿದ ಜಿಲ್ಲೆಗಳಲ್ಲಿ ಬರದ ಛಾಯೆ ಆವರಿಸಿದೆ. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಗಮನ ಇಲ್ಲ. ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿದ್ದು ಬಿಟ್ಟರೆ ಯಾವುದೇ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಕಿಡಿಕಾರಿದರು.
ಮನೆ ಕಳೆದುಕೊಂಡವರಿಗೆ 10 ಲಕ್ಷ ಪರಿಹಾರ ನೀಡಬೇಕು. ಬೆಳೆ ನಾಶ ಆಗಿರುವುದಕ್ಕೆ ಪ್ರಾಥಮಿಕ ಸಮಿಕ್ಷೆ ಕೂಡ ಕೈಗೊಂಡಿಲ್ಲ. ಯಾವೊಬ್ಬ ಸಚಿವರೂ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರಕಾರ ಕೆವರ್ಗಾವಣೆ ದಂಧೆಯಲ್ಲಿ ಮುಳುಗಿದೆ. ಸಚಿವರ, ಶಾಸಕರ ನಡುವಿನ ಜಗಳ ಬಗೆಹರಿಸುವುದರಲ್ಲಿ ಕಾಲ ಕಳೆಯುತ್ತಾ, ಕುರ್ಚಿ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಹೆಣಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು..