ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾರಿಗೊಳಿಸಿದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇದೀಗ ಖಾಸಗಿ ಬಸ್‌ಗಳು ಹಾಗೂ ಬಾಡಿಗೆ ಆಟೋಗಳಿಗೆ ಪ್ರಯಾಣಿಕರ ಕೊರತೆ ಏರ್ಪಟ್ಟಿದೆ. ಹೀಗಾಗಿ ಅಸಮಾಧಾನ ಹೊರಹಾಕಿರುವ ಖಾಸಗಿ ಬಸ್ ಮಾಲೀಕರು, ಟ್ಯಾಕ್ಸಿ ಹಾಗೂ ಆಟೋ ಚಾಲಕರ ಸಂಘಟನೆಗಳು ಜುಲೈ 27ರಂದು ಬೆಂಗಳೂರು ಮುಷ್ಕರಕ್ಕೆ (Bengaluru Strike) ಕರೆ ನೀಡಿವೆ.
ಇತ್ತ ಈ ವಿಚಾರ ಸುದ್ದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ, 35 ಸಂಘಟನೆಗಳ ಮುಖಂಡರ ಜತೆ ಮಾತುಕತೆ ನಡೆಸಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಜುಲೈ 24ರಂದು ನಗರದಲ್ಲಿ ಸಭೆ ಕರೆದಿದೆ.
ಶಾಂತಿನಗರದ ಸಾರಿಗೆ ಇಲಾಖೆ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ 11 ಗಂಟೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ಆರ್‌ಟಿಒ ಕಮಿಷನರ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಭಾಗವಹಿಸಲಿದ್ದಾರೆ. ಟ್ಯಾಕ್ಸಿ, ಆಟೋ ಹಾಗೂ ಖಾಸಗಿ ಬಸ್ ಮಾಲೀಕರು, ಚಾಲಕರ ಅಹವಾಲುಗಳಲ್ಲಿ ಸಾರಿಗೆ ಸಚಿವರು ಆಲಿಸಲಿದ್ದಾರೆ.
ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಮನವೊಲಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ. ಖಾಸಗಿ ಬಸ್, ಆಟೋ, ಟ್ಯಾಕ್ಸಿಗೆ ಪ್ರಯಾಣಿಕರ ಕೊರತೆ ಉಂಟಾಗಿರುವುದರಿಂದ ಪರಿಹಾರ ಕೊಡಬೇಕು ಎಂದು ಒಕ್ಕೂಟ ಒತ್ತಾಯ ಮಾಡಿದೆ.