ದುಷ್ಕೃತ್ಯದ ಕೈವಾಡ ಮತ್ತೆ ಬಯಲು: ಪಹಲ್ಗಾಮ್​ ದಾಳಿ ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್​ ಸೇನಾ ಸಿಬ್ಬಂದಿ ಭಾಗಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿ ದಾಳಿಯ ಹಿಂದಿನ ಭಯೋತ್ಪಾದಕರಲ್ಲಿ ಒಬ್ಬನಾದ ಹಬೀಬ್ ತಾಹಿರ್ ಅಲಿಯಾಸ್ ಅಫ್ಘಾನಿಯ ಅಂತ್ಯಕ್ರಿಯೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆದಿದ್ದು, ಅದರಲ್ಲಿ ಪಾಕ್​​ನ ಸೇನಾಧಿಕಾರಿಗಳು ಮತ್ತು ಲಷ್ಕರ್​ ಎ ತೊಯ್ಬಾದ ಉಗ್ರರು ಭಾಗಿಯಾಗಿದ್ದರು.

ಉಗ್ರನ ಅಂತ್ಯಕ್ರಿಯೆಯಲ್ಲಿ ಪಾಕ್​​ನ ಸೇನೆ ಭಾಗಿಯಾಗಿದ್ದು ಇದು ಎರಡನೇ ಬಾರಿ. ಆಪರೇಷನ್​ ಸಿಂದೂರ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಅಂತ್ಯಕ್ರಿಯೆಯಲ್ಲೂ ಅಲ್ಲಿನ ಸೇನಾಧಿಕಾರಿಗಳು ಭಾಗಿಯಾಗಿದ್ದರು.

ಭಾರತೀಯ ಸೇನೆ ಇತ್ತೀಚೆಗೆ ನಡೆಸಿದ ‘ಆಪರೇಷನ್ ಮಹಾದೇವ್‌’ ಕಾರ್ಯಾಚರಣೆಯಲ್ಲಿ ಪಹಲ್ಗಾಮ್​ ದಾಳಿಕೋರರಲ್ಲಿ ಒಬ್ಬನಾದ ಉಗ್ರ ತಹೀರ್ ಹಬೀಬ್ ಅಲಿಯಾಸ್ ಅಫ್ಘಾನಿ ಹತ್ಯೆಗೀಡಾಗಿದ್ದನು. ಸಾವು ಖಚಿತವಾದ ಹಿನ್ನೆಲೆ ಆತನ ಕುಟುಂಬಸ್ಥರು ಇಸ್ಲಾಂ ಸಂಪ್ರದಾಯದ ಜನಾಜಾ ಎ ಗೈಬ್ (ಮೃತದೇಹ ರಹಿತ ಅಂತ್ಯಕ್ರಿಯೆ) ಪ್ರಾರ್ಥನೆ ಸಲ್ಲಿಸಿ ಅಂತ್ಯಕ್ರಿಯೆ ಮಾಡಿದ್ದಾರೆ.ಪಿಒಕೆಯ ರಾವಲ್ ಕೋಟ್ ಖೈಗಲಾ ಗ್ರಾಮದಲ್ಲಿ ಈ ಅಂತ್ಯಕ್ರಿಯೆ ನಡೆದಿದೆ.

ಆ ವೇಳೆ ಸ್ಥಳೀಯ ಲಷ್ಕರ್ ಕಮಾಂಡರ್ ರಿಜ್ವಾನ್ ಹನೀಫ್ ಮತ್ತು ಪಾಕ್​ನ ಸೇನೆಯ ಸಿಬ್ಬಂದಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಪ್ರಯತ್ನಿಸಿದ್ದಾರೆ. ಆದರೆ, ಉಗ್ರನ ಕುಟುಂಬಸ್ಥರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದಕರು ಸ್ಥಳೀಯರನ್ನು ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳಿಂದ ಬೆದರಿಸಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹನೀಫ್ ಮತ್ತು ಅವರ ಸಹಚರರು ಅಂತಿಮವಾಗಿ ಸ್ಥಳದಿಂದ ಹೊರಹೋಗಬೇಕಾಯಿತು.

ಇದಕ್ಕೂ ಮೊದಲು, ಪಹಲ್ಗಾಮ್​ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಆಪರೇಷನ್​ ಸಿಂದೂರ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದ ಲಷ್ಕರ್​ ಎ ತೊಯ್ಬಾದ ಉಗ್ರರ ಸಾಮೂಹಿಕ ಅಂತ್ಯಕ್ರಿಯೆ ನಡೆದಿತ್ತು. ಅಂದು ಪಾಕಿಸ್ತಾನದ ಸೇನಾ ಕಮಾಂಡರ್​​ಗಳು ಉಗ್ರರಿಗೆ ಅಂತಿಮ ನಮನ ಸಲ್ಲಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!