ಹೊಸದಿಗಂತ ವರದಿ ಬೆಂಗಳೂರು :
ಚುನಾವಣೆಗೂ ಮೊದಲು ಪಕ್ಷದ ವತಿಯಿಂದ ಚಿತ್ರದುರ್ಗದಲ್ಲಿ ಎಸ್ಸಿ, ಎಸ್ಟಿ ಸಮುದಾಯಗಳ ಸಮಾವೇಶ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಒಂದು ನಿರ್ಣಯ ಮಾಡಲಾಗಿತ್ತು. ಅದರಂತೆಯೇ, ಒಳ ಮೀಸಲಾತಿ ವಿಚಾರದಲ್ಲಿ ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾವೆಲ್ಲ ಅಭಿಪ್ರಾಯ ಪಟ್ಟಿದ್ದೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗುರುವಾರ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಸದಾಶಿವ ಆಯೋಗದ ವರದಿಯನ್ನು ಎರಡು ಸದನದಲ್ಲಿ ಮಂಡಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಹಿಂದಿನ ಸರ್ಕಾರವು ಒಂದು ಉಪಸಮಿತಿಯನ್ನು ರಚಿಸಿ, ವಿಷಯವನ್ನು ರಿಜೆಕ್ಟ್ ಮಾಡಿದೆ. ಬೇರೆ ವಿಷಯವನ್ನು ತೆಗೆದುಕೊಂಡು ಮೀಸಲಾತಿ ಹೆಚ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದರು.
ಶಿಫಾರಸ್ಸಿನಲ್ಲಿ ಒಳ ಮೀಸಲಾತಿಯಲ್ಲಿ ಇಂತಿಷ್ಟು ಮೀಸಲಾತಿ ನೀಡಬೇಕೆಂದು ಹೇಳಲಾಗಿತ್ತು. ಆದರೆ ಈ ಪ್ರಕ್ರಿಯೆಯು ಕಾನೂನಾತ್ಮಕವಾಗಿ ನಡೆದಿಲ್ಲ. ಈಗ ಅದನ್ನು ಪುನರ್ ಪರಿಶೀಲನೆ ನಡೆಸುತ್ತೇವೆ. ಸಂವಿಧಾನ 341 ತಿದ್ದುಪಡಿ ಆಗಬೇಕು. ಈ ಬಗ್ಗೆ ಸರ್ಕಾರದಲ್ಲಿ ಚರ್ಚಿಸಬೇಕಾಗುತ್ತದೆ ಎಂದರು.
ಇದನ್ನು ಸರ್ಕಾರ ಯಾವ ರೀತಿ ನಿರ್ಧಾರ ಮಾಡಬೇಕಾಗುತ್ತದೆ ಎಂಬುದನ್ನು ಕ್ಯಾಬಿನೇಟ್‌ಗೆ ತರಬೇಕಾಗುತ್ತದೆ. ಹಿಂದಿನ ಸರ್ಕಾರವು ವರದಿಯನ್ನು ಸದನದಲ್ಲಿ ರಿಜೆಕ್ಟ್ ಮಾಡಿಬಿಟ್ಟಿದ್ದಾರೆ. ಹೀಗಾಗಿ ಈ ವಿಷಯವನ್ನು ಮತ್ತೇ ಸದನಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಹೊಣೆ ಹಾಕಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಿದ್ದುಪಡಿ (ಅಮೆಂಡ್ಮೆಂಟ್) ಯನ್ನು ಕೇಂದ್ರ ಸರ್ಕಾರವೇ ಮಾಡಬೇಕಾಗುತ್ತದೆ. ನಮಗೆ ತಿದ್ದುಪಡಿ ಮಾಡುವ ಅಧಿಕಾರ ಇದ್ದಿದ್ದರೆ, ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿರಲಿಲ್ಲ. ಹೀಗಾಗಿ ಕೇಂದ್ರದ ಮೇಲೆ ಹೊಣೆ ಹಾಕುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ. ತಿದ್ದುಪಡಿ ಮಾಡಬೇಕು ಎಂಬುದನ್ನು ಕೇಂದ್ರಕ್ಕೆ ತಿಳಿಸುತ್ತಿದ್ದೆವೆ ಎಂದರು.
ಕೆಲ ಶಾಸಕರು ಮೂರರಿಂದ ನಾಲ್ಕು ಸಾರಿ ಆಯ್ಕೆಯಾಗಿದ್ದಾರೆ. ಅಂಥವರಿಗೆ ಸಚಿವ ಸ್ಥಾನ ಲಭಿಸಿಲ್ಲ. ಇನ್ನೂ ಹೆಚ್ಚಿನ ಸೇವೆ, ಜವಾಬ್ದಾರಿಗಳನ್ನು ನಿಭಾಯಿಸಬೇಕೆಂಬ ಆಸೆ ಇರುತ್ತದೆ. ಹೀಗಾಗಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಸಧ್ಯದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಒಳ ಮೀಸಲಾತಿ ವಿಚಾರದಲ್ಲಿ ಬಲ ಸಮುದಾಯದವರು ವಿಶ್ವಾಸಕ್ಕೆ ಬಂದಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಮಾಡಿದ ಮೇಲೆ ಎಲ್ಲರೂ ವಿಶ್ವಾಸಕ್ಕೆ ಬರಲೇಬೇಕಾಗುತ್ತದೆ. ಇಡೀ ದೇಶದಲ್ಲಿ ಕಾನೂನಿಗೆ ಎಲ್ಲರೂ ಗೌರವಿಸಲೇಬೇಕು ಎಂದು ತಿಳಿಸಿದರು.