ಹೊಸದಿಗಂತ ವರದಿ, ಮಡಿಕೇರಿ:
ಪತ್ನಿಯನ್ನು ಕೊಂದ ಪತಿರಾಯನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ನಡೆದಿದೆ.
ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ ಪಣಿಯರವರ ಮಂಜು ಎಂಬಾತನೇ ತನ್ನ ಪತ್ನಿಯಾದ ನಂದಿನಿ ಎಂಬಾಕೆಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಟಿ.ಶೆಟ್ಟಿಗೇರಿಯ ಕಾಫಿ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಮಂಜು ಹಾಗೂ ನಂದಿನಿ ಮಧ್ಯೆ ಮದುವೆಯಾಗಿ ಒಂದೂವರೆ ವರ್ಷವಾದರೂ ಮಕ್ಕಳಾಗದಿರುವ ಕಾರಣಕ್ಕೆ ಹಲವು ಬಾರಿ ಜಗಳವಾಗುತ್ತಿತ್ತು ಎನ್ನಲಾಗಿದೆ.
ಅದರಂತೆ ಡಿ. 17ರ ರಾತ್ರಿ ಮಕ್ಕಳಾಗದಿರುವ ಕಾರಣಕ್ಕೆ ಜಗಳವಾಡಿದ್ದು, ಮದ್ಯದ ಅಮಲಿನಲ್ಲಿದ್ದ ಮಂಜು ಆತನ ಪತ್ನಿ ನಂದಿನಿಗೆ ದೊಣ್ಣಯಿಂದ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೆ ಪತ್ನಿ ಮೃತವಾಗಿರುವುದನ್ನು ಕಂಡು ಭಯಗೊಂಡು ಮನೆಯಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೀರಾಜಪೇಟೆ ಉಪವಿಭಾಗದ ಡಿವೈಎಸ್ಪಿ ಆರ್.ಮೋಹನ್‌ಕುಮಾರ್, ಶ್ರೀಮಂಗಲ ಪೊಲೀಸ್ ಠಾಣೆ ಪ್ರಭಾರ ಪಿಎಸ್ಐ ಕ್ಲಮೆಂಟ್ ಸಾಲ್ದಾನ ಮತ್ತು ಸಿಬ್ಬಂದಿಗಳು, ಅಪರಾಧ ಕೃತ್ಯ ಪತ್ತೆ ಅಧಿಕಾರಿಗಳ ವಿಶೇಷ ತಂಡ, ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ.