ಹೊಸದಿಗಂತ ವರದಿ,ದಾವಣಗೆರೆ:
ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪತ್ನಿಯನ್ನು ಕೊಲೆ ಮಾಡಿದ ಪತಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಜಗಳೂರು ತಾಲ್ಲೂಕು ಗೌರಿಪುರ ಗ್ರಾಮದಲ್ಲಿ ನಡೆದಿದೆ.
ಜಗಳೂರು ತಾಲ್ಲೂಕಿನ ಸಂತೆ ಮುದ್ದಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಜಿ.ನಾಗಮ್ಮ(50 ವರ್ಷ) ತನ್ನ ಪತಿಯಿಂದಲೇ ಕೊಲೆಗೀಡಾಗಿದ್ದಾರೆ. ಶಿಕ್ಷಕಿ ನಾಗಮ್ಮ ಮತ್ತು ಸತ್ಯಪ್ಪ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಕ್ರಮ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಪತಿ ಸತ್ಯಪ್ಪ ತನ್ನ ಪತ್ನಿ ನಾಗಮ್ಮಳನ್ನು ಕೊಲೆ ಮಾಡಿ, ಡೆತ್ ನೋಟ್ ಬರೆದಿಟ್ಟು ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ.
ಸದ್ಯ ಸತ್ಯಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಎಎಸ್ಪಿ ಜಿ.ಮಂಜುನಾಥ, ಡಿವೈಎಸ್ಪಿ ಬಸವರಾಜ್ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.